Wednesday 28 November 2018

ಮನದಾಸೆ ಹಕ್ಕಿಯಾಗಿ

*ಮನದಾಸೆ ಹಕ್ಕಿಯಾಗಿ..*

ನಮ್ಮ ಮನೆಯ ಕರಿ ಹಂಚಿನ ಸೂರಿನಲ್ಲಿ ಗುಬ್ಬಚ್ಚಿಯೊಂದು ಗೂಡು ಕಟ್ಟುತ್ತಿತ್ತು. ಗುಬ್ಬಚ್ಚಿಯು ಚೀಂವ್... ಚೀಂವ್...ಎಂದು ಪಟ ಪಟನೆ ರೆಕ್ಕೆ ಬಡಿಯುತ್ತಾ ನಮ್ಮ ಕಣ್ಣ ಮುಂದೆನೇ ಹಾದು ಹೊಗುತ್ತಿದ್ದರೆ ನನಗೆ ಒಂದು ರೀತಿಯ ಆನಂದ ಸಿಗುತ್ತಿತ್ತು. ಗುಬ್ಬಚ್ಚಿ ಗೂಡು ಹೆಣೆಯುವುದನ್ನು ನೋಡುವುದೇ ಒಂದು ಕುತೂಹಲ.ತನ್ನ ಕೊಕ್ಕಿನಿಂದ ಒಂದೊಂದೇ ಹುಲ್ಲಿನ ಗರಿಗಳನ್ನು ತಂದು ಸೂರಿನಡಿಯಲ್ಲಿ ಸೇರಿಸಿ ಗೂಡು ಕಟ್ಟುತ್ತಿತ್ತು. ಶಾಲೆಯಿಂದ ಬಂದ ಕೂಡಲೇ ನಾನು ಗುಬ್ಬಚ್ಚಿಯ ಗೂಡಿನ ಬಳಿ ಹೋಗಿ ಎಷ್ಟು ಮೊಟ್ಟೆ ಇಟ್ಟಿದೆಯೆಂದು ಪ್ರತಿದಿನ ಹೋಗಿ ನೋಡುತ್ತಿದ್ದೆ.  ಒಂದೊಂದು ಸಾರಿ ಗುಬ್ಬಚ್ಚಿಯೂ ಸಹ ಗೂಡಲ್ಲೇ ಇರುತ್ತಿತ್ತು. ನಾನು ಅದಕ್ಕೆ ಏನೂ ತೊಂದರೆ ಮಾಡದಂತೆ ಹಾಗೆಯೇ ಹಿಂದೆ ಸರಿಯುತ್ತಿದ್ದೆನು. ಹದಿನೈದು ದಿನಗಳ ಹಿಂದೆ ಗುಬ್ಬಚ್ಚಿ ಗೂಡು ಕಟ್ಟುತ್ತಿದ್ದಾಗ ನಾನು ಗುಬ್ಬಚ್ಚಿಗೆ ಸಹಾಯ ಮಾಡಲೆಂದೇ ಸಿದ್ದಣ್ಣನ ಕಣದಲ್ಲಿರುವ ಬಣವೆಯಿಂದ ಒಂದು ಹಿಡಿ ಹುಲ್ಲನ್ನು ತಂದು ಗುಬ್ಬಚ್ಚಿ ಗೂಡುಕಟ್ಟುತ್ತಿದ್ದ ಸ್ಥಳದ ಹತ್ತಿರಕ್ಕೆ ತಂದು ಇಟ್ಟೆವು. ಪಾಪ ಗುಬ್ಬಚ್ಚಿ ಬಹು ದೂರ ಹಾರಿ ಹೋಗಿ ಕಷ್ಟಪಟ್ಟು ಹುಲ್ಲನ್ನು ತಂದು ಗೂಡನ್ನು ಕಟ್ಟುತ್ತಿತ್ತು. ಈಗ ಗುಬ್ಬಚ್ಚಿಗೆ ಸ್ವಲ್ಪ ಅನುಕೂಲವಾಗಬಹುದೆಂದು ಭಾವಿಸಿದೆನು. ಆದರೆ ಗುಬ್ಬಚ್ಚಿ ನಾನು ತಂದ ಹುಲ್ಲನ್ನು ಮುಟ್ಟಲೇ ಇಲ್ಲ ಮತ್ತೆ ಬಹು ದೂರ ಹಾರಿಕೊಂಡೇ ಹುಲ್ಲನ್ನು ತರುತ್ತಿತ್ತು. ಗುಬ್ಬಚ್ಚಿಗೆ ನನ್ನ ಸಹಾಯ ಬೇಕಾಗಿರಲಿಲ್ಲ. ಇಲ್ಲೇ ಹತ್ತಿರದಲ್ಲಿ ಹುಲ್ಲು ಇದ್ದರೂ ಗುಬ್ಬಚ್ಚಿ ಹೀಗೇಕೆ ಮಾಡುತ್ತಿದೆ. ಅದಕ್ಕೆ ಮಾನವನ ಸಹಾಯ ಬೇಕಿಲ್ಲವೇ..? ಎಂದೆನಿಸಿತು....

ಒಂದು ದಿನ ಅಮ್ಮ ಸೂರಿನಲ್ಲಿರುವ ಗುಬ್ಬಚ್ಚಿ ಗೂಡನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದಳು. ನಾನು ಗುಬ್ಬಚ್ಚಿ ಗೂಡು ಬೇಕೇ ಬೇಕೆಂದು ಹಟ ಹಿಡಿದೆ.
"ನಾಳೆ ಸರ್ಕಾರದಿಂದ ರೈತ ಹಿತರಕ್ಷಣ ಸಮಿತಿಯವರು ವ್ಯವಹಾರದ ಮಾತುಕತೆ ನಡೆಸಲು ನಮ್ಮ ಮನೆಗೆ ಬರುತ್ತಿದ್ದಾರೆ. ತುಂಬಾ ದೊಡ್ಡ ಮನುಷ್ಯರು.ಕಾರಿನಲ್ಲಿ ಬರುತ್ತಾರೆ. ಅವರ ಮುಂದೆ ಈ ಗಲೀಜು ಇದ್ದರೆ ಏನಂದುಕೊಳ್ಳುತ್ತಾರೆ. ನನಗೂ ಸಹ ದಿನಾ ಈ ಗುಬ್ಬಚ್ಚಿಯ ಪಿಕ್ಕೆಗಳನ್ನು ಗುಡಿಸಿ ಸಾಕಾಗಿದೆ" ಎಂದು ಗೊಣಗಿದಳು.
ನಾನು ಗುಬ್ಬಚ್ಚಿ ಬೇಕೇ ಬೇಕು ಎಂದು ಹಠ ಹಿಡಿದು ಅಳಲು ಪ್ರಾರಂಭಿಸಿದೆ. ಅಮ್ಮ ನನ್ನ ಹಠಕ್ಕೆ ಮಣಿದು ಇನ್ನು ಮಂದೆ ನಿನ್ನ ಈ ಗುಬ್ಬಚ್ಚಿ ಗೂಡನ್ನು ತೆಗೆದು ಹಾಕುವುದಿಲ್ಲ ಎಂದು ಮಾತು ಕೊಟ್ಟ ಮೇಲೆ ಅಳುವುದನ್ನು ನಿಲ್ಲಿಸಿದೆ. ಅಂದಿನಿಂದ ನಾನು ಗುಬ್ಬಚ್ಚಿಗೆ ಇನ್ನೂ ಹತ್ತಿರವಾದೆ.

ಪ್ರತಿನಿತ್ಯ ಗುಬ್ಬಚ್ಚಿಯನ್ನು ನೋಡುವುದು. ಅದರೊಡನೆ ಮಾತನಾಡುವುದು.ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂತೋಷ ಪಡುವುದು, ಹೀಗೆ ದಿನವೂ ನಡೆಯುತ್ತಿತ್ತು. ಮೂರು ತಿಂಗಳಲ್ಲೇ ನನ್ನ ಮತ್ತು ಗುಬ್ಬಚ್ಚಿಯ ಸ್ನೇಹ ಗಾಢವಾಗಿ ಬೆಳೆಯಿತು. ಗುಬ್ಬಚ್ಚಿಯೂ ಸಹ ನನ್ನ ಪ್ರೀತಿಗೆ ಸ್ಪಂದಿಸುತ್ತಿತ್ತ....

ಆ ದಿನ ಅಪ್ಪ ತುಂಬಾ ದುಃಖದಿಂದ ಇದ್ದರು. ಮೂರು ತಿಂಗಳ ಹಿಂದೆ ನಮ್ಮ ಮನೆಗೆ ಬಂದ ರೈತ ಹಿತರಕ್ಷಣ ಸಮಿತಿಯವರು ಅಪ್ಪನಿಗೆ ಹಣಕಾಸಿನ ವಿಷಯದಲ್ಲಿ ಪಂಗನಾಮ ಹಾಕಿದ್ದರು. ಆ ಸಮಿತಿಯವರು ರೈತರು ನಮ್ಮಲ್ಲಿ ಹಣ ಹೂಡಿದರೆ ಮೂರು ತಿಂಗಳಲ್ಲೇ ಎರಡರಷ್ಟು ಹಣ ಕೊಡುತ್ತೇವೆ ಎಂದು ನಮ್ಮ ಊರಿನಲ್ಲಿ ಸುದ್ಧಿ ಹಬ್ಬಿಸಿದ್ದರು. ನಮ್ಮ ಪಕ್ಕದ ಮನೆಯ ಸಿದ್ದಣ್ಣ ಹತ್ತು ಸಾವಿರ ಹಣ ಹೂಡಿದ್ದರು. ಮೂರು ತಿಂಗಳಲ್ಲಿ ಸಿದ್ದಣ್ಣನಿಗೆ ಇಪ್ಪತ್ತು ಸಾವಿರ ಹಣ ಬಂದಿತ್ತು. ಈ ವಿಷಯ ತಿಳಿದ ಅಪ್ಪನಿಗೆ ತುಂಬಾ ಖುಷಿಯಾಯಿತು. ಎರಡು ವರ್ಷದಿಂದ ಅಮ್ಮನಿಗೆ ಎರಡೆಳೆಯ ಅವಲಕ್ಕಿ ಸರ ಮಾಡಿಸಲೆಂದು ಅಪ್ಪ ಹತ್ತು ಸಾವಿರ ಹಣ ಕೂಡಿಟ್ಟಿದ್ದರು. ಸಿದ್ದಣ್ಣ ಹೇಳಿದ್ದರಿಂದ ಅಪ್ಪ ಹತ್ತು ಸಾವಿರ ರೂಪಾಯಿಗಳನ್ನು ರೈತ ಹಿತರಕ್ಷಣ ಸಮಿತಿಯಲ್ಲಿ ಹೂಡಿದ್ದರು. ಕಾರಿನಲ್ಲಿ ಬಂದ ಆ ದೊಡ್ಡ ಮನುಷ್ಯರು ಅಪ್ಪನಿಂದ ಹಣ ಪಡೆದು ಇಪ್ಪತ್ತು ಸಾವಿರ ರೂಪಾಯಿಗಳು ಎಂದು ಬರೆದು ಅವರೇ ಸಹಿ ಹಾಕಿದ ಬಾಂಡ್ ಪತ್ರವನ್ನು ನೀಡಿದ್ದರು. ಈಗ ಆ ಪತ್ರ ನೀಡಿ ನಾಲ್ಕು ತಿಂಗಳಾಗಿತ್ತು. ಆದರೆ ಅಪ್ಪ ಹೂಡಿದ ಹಣಕ್ಕೆ ಪಂಗನಾಮ ಹಾಕಿದ್ದರು. ತುಂಬಾ ಕಡೆ ವಿಚಾರಿಸಿದಾಗ ಸರ್ಕಾರದಲ್ಲಿ ಆ ರೀತಿಯ ಯಾವುದೇ ಯೋಜನೆಗಳಿಲ್ಲ. ಆ ರೀತಿಯ ಯಾವುದೇ ಸಮಿತಿ ಸರ್ಕಾರದಲ್ಲಿ ಇಲ್ಲವೇ ಇಲ್ಲ ಎಂಬ ವಿಷಯ ತಿಳಿಯಿತು. ಅಪ್ಪನ ತರ ನಮ್ಮ ಹಳ್ಳಿಯಲ್ಲಿ ಹತ್ತಾರು ಜನ ಹಣ ಕಳೆದು ಕೊಂಡಿದ್ದರು.ಬಹು ದಿನಗಳಿಂದ ಎರಡೆಳೆಯ ಅವಲಕ್ಕಿ ಸರದ ಆಸೆ ಇಟ್ಟುಕೊಂಡು ಏನೆನೋ ಕಲ್ಪನೆ ಕಟ್ಟಿಕೊಂಡಿದ್ದ ಅಮ್ಮನಿಗೆ ಈ ವಿಷಯ ತಿಳಿದಾಗ ದುಃಖದಿಂದ ಕಣ್ಣೀರು ಹಾಕಿದ್ದಳು.

ನಾನು ಪ್ರತಿದಿನ ಗುಬ್ಬಚ್ಚಿಗಾಗಿ ತೆಂಗಿನ ಚಿಪ್ಪಿನಲ್ಲಿ ನೀರು ಹಾಕಿ ಕುಡಿಯಲೆಂದೇ ಗೂಡಿನ ಪಕ್ಕದಲ್ಲಿ ಇಡುತ್ತಿದ್ದೆ. ಅಮ್ಮ ಅತ್ತ ಆ ದಿನ ಗುಬ್ಬಚ್ಚಿ ನಾನಿಟ್ಟ ನೀರು ಕುಡಿಯಲೇ ಇಲ್ಲ. ನನ್ನ ಕಣ್ಣ ಮುಂದೆಯೇ ನಮ್ಮ ಮನೆಯ ದೂರದಲ್ಲಿಯೇ ಇರುವ ಹೊಂಡದಿಂದ ಗುಬ್ಬಚ್ಚಿಯು ನೀರು ಕುಡಿದು ಬಂದಿತ್ತು ನನಗೆ ಗುಬ್ಬಚ್ಚಿಯ ಮೇಲೆ ಕೋಪ ಬಂದಿತು. ಈ ವಿಷಯ ಅಮ್ಮನ ಮುಂದೆ ಹೇಳಿಕೊಂಡು ನಾನೂ ದುಃಖಿಸಿದೆ..
"ನಿನ್ನೆ ಮಳೆ ಬಂದಿದೆಲ್ಲಾ ಮಗು, ಅದಕ್ಕೆ ಗುಬ್ಬಚ್ಚಿಯು ಪರಿಸರದಲ್ಲಿ ಸಿಗುವ ನೀರನ್ನೇ ಕುಡಿಯುತ್ತಿದೆ. ಹೊಂಡ ಬತ್ತಿ ಹೋದಾಗ ಮತ್ತೆ ನೀನಿಟ್ಟ ನೀರನ್ನೇ ಕುಡಿಯುತ್ತದೆ ಬಿಡು" ಎಂದು ನನ್ನನ್ನು ಸಮಾಧಾನ ಪಡಿಸಿದಳು.
"ಯಾಕಮ್ಮಾ ಗುಬ್ಬಚ್ಚಿಗೆ ನನ್ನ ಸಹಾಯ ಬೇಡವಾಯಿತಾ...?" ಎಂದು ನಾನು ಮುಗ್ದವಾಗಿ ಪ್ರಶ್ನಿಸಿದೆ.
"ಇಲ್ಲ ಮಗು ಗುಬ್ಬಚ್ಚಿಗಳು ಮನುಷ್ಯರಂತಲ್ಲ. ಮನುಷ್ಯರು ಬೀಸುವ ಜಾಲಕ್ಕೆ ಅವು ಸುಲಭವಾಗಿ  ಬಲಿಯಾಗುವುದಿಲ್ಲ. ದುರಾಸೆ ಪಟ್ಟು ಇನ್ನೊಬ್ಬರ ಸಹಾಯ ಅಂತ ಬೇಡೋದು ಮನುಷ್ಯನೊಬ್ಬನೆ ಮಗು.... ಗುಬ್ಬಚ್ಚಿಗಳು ತಾವೇ ಕಷ್ಟಪಟ್ಟು ಆಹಾರ ನೀರನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ನಾವು ಹಾಗಲ್ಲ ಪುಕ್ಕಟ್ಟೆ ಏನೋ ಸಿಗುತ್ತೆ ಎಂದಾಕ್ಷಣ ಆಸೆ ಪಟ್ಟು ಜೊಲ್ಲು ಸುರಿಸುತ್ತೇವೆ. ಗುಬ್ಬಚ್ಚಿಯದೇ ಸರಿಯಾದುದು. ನೀನೂ ಗುಬ್ಬಚ್ಚಿಯ ಈ ನೀತಿಯನ್ನು ಕಲಿತು ಕೋ......"

ಅಮ್ಮ ಗುಬ್ಬಚ್ಚಿಯಿಂದ ಸಾಕಷ್ಟು ಪಾಠ ಕಲಿತ್ತಿದ್ದಳು. ರೈತ ಹಿತರಕ್ಷಣ ಸಮಿತಿಯವರು ಅಂತ ಹೇಳಿಕೊಂಡು ಬಂದಿದ್ದ ಆ ಕಳ್ಳರ ಮಾಡಿದ ಮೋಸದ ನೋವು ಅಪ್ಪನ ಮನದಲ್ಲಿ ಮಡುಗಟ್ಟಿಕೊಂಡಿತ್ತು. ಆ ನೋವನ್ನು ಅಪ್ಪ ನಿಧಾನವಾಗಿ ಅಮ್ಮನಿಗೂ ರವಾನಿಸುತ್ತಿದ್ದ. ಅಪ್ಪ ಕಳೆದುಕೊಂಡ ಹತ್ತು ಸಾವಿರ ರೂ ಈಗಿನ ಕಾಲಕ್ಕೆ ಮೂರು ಲಕ್ಷಕ್ಕೆ ಸಮವಾಗುತ್ತಿತ್ತು. ಬಡತನದ ದೇಶ ಎಂದು ಗುರುತಿಸಿಕೊಂಡಿದ್ದ ಭಾರತೀಯರಿಗೆ ಹತ್ತು ಸಾವಿರ ರೂಗಳನ್ನು ಕೂಡಿ ಹಾಕುವುದೇನೂ ಸಾಮಾನ್ಯದ ವಿಷಯವಾಗಿರಲಿಲ್ಲ. ಇದೇ ನೋವಿನಿಂದ ಅಪ್ಪನಿಗೆ ಗಡ್ಡವೂ ಬೆಳೆಯಲಾರಂಬಿಸಿತು. ಹಣ ಕಳೆದುಕೊಂಡ ನೋವು ಅಪ್ಪನಿಗೆ ಜೀವನೋತ್ಸಾಹ ಕುಗ್ಗಿಸಿತು. ಮೋಸದ ಜಾಲ ಹೀಗಿರುತ್ತದೆ ಎಂದು ನಮ್ಮ ಹಳ್ಳಿಗೆ ಪರಿಚಯಿಸಿದ ಮೊದಲ ಘಟನೆ ಅದು. ಅಮ್ಮ ಹಬ್ಬಕ್ಕೆ  ಸಾಮಾನು ಬೇಕು ಎಂದರೂ ಅಪ್ಪ ರೇಗಿ ಬೀಳುತ್ತಿದ್ದ. ಆ ಒಂದು ವರ್ಷ ನಮ್ಮನೆಯಲ್ಲೂ ಹಬ್ಬವೂ ಇಲ್ಲ ಹೊಸ ಬಟ್ಟೆಯೂ ಇರಲಿಲ್ಲ...

ಆ ವೇಳೆಗಾಗಲೇ ನಾನು ಹಾಕಿದ್ದ ಚಡ್ಡಿಯು ಹಿಂದಗಡೆ ಸವೆದು ಸವೆದು ಪಾರದರ್ಶಕವಾಗಿತ್ತು. ಹರಿದ ಚಡ್ಡಿಯನ್ನು ಹಾಕಿಕೊಂಡು ಶಾಲೆಗೆ ಹೋಗಲಾರೆ ಎಂದು ಹಠ ಹಿಡಿದೆ. ನನ್ನ ಚಡ್ಡಿಯು ಹರಿದು ಹೋಗಿದ್ದಕ್ಕೆ ಅಮ್ಮನಿಗೂ ಏನು ಮಾಡಬೇಕೆಂದು ತೋಚದಂತಾಗಿತ್ತು. ಅಪ್ಪನಿಗೆ ಏನೇ ಕೇಳಿದರೂ ಉರಿದು ಬೀಳುತ್ತಿದ್ದ. ಅಪ್ಪ ಆ ಕೋಪವನ್ನು ಅಮ್ಮನಿಗೂ ದಿನೇ ದಿನೇ ಸಹಿಸಿ ಸಾಕಾಗಿ ಹೋಗಿತ್ತು. ಅಮ್ಮ ನನ್ನ ಚಡ್ಡಿಯ ವಿಷವನ್ನು ಅಪ್ಪನವರೆಗೆ ತೆಗೆದುಕೊಂಡು ಹೋಗಲೇ ಇಲ್ಲ. ನಮ್ಮೆಲ್ಲರ ಭವಿಷ್ಯಕ್ಕೆ ಮತ್ತೆ ದುಡ್ಡು ಕೂಡಿಡುವ ಭರದಲ್ಲಿ ಅಪ್ಪನೇ ತಿಂಗಳಿಗೊಂದು ಸಲ ಗಡ್ಡ ಕ್ಷೌರ ಮಾಡಿಕೊಳ್ಳುವಾಗ. ಅಮ್ಮನೂ ಸಹ ಅಪ್ಪನೊಂದಿಗೆ ಸಹಕರಿಸಲೇ ಬೇಕಾಗಿತ್ತು. ಬಾಳ ಪಯಣದಲ್ಲಿ ಜೋಡಿ ಎತ್ತುಗಳು ಕೊರಳಿಗೆ ನೊಗ ಕಟ್ಟಿಕೊಂಡು ಹೊಲದಲ್ಲಿ ದುಡಿಯುವುದಿಲ್ಲವೇ ಹಾಗೇ. ಅಪ್ಪ ಸಹ ಮನೆಯಲ್ಲಿದ್ದ ಜೋಡಿ ಎತ್ತನ್ನು ತೋರಿಸಿ ಅಮ್ಮನಿಗೆ ಜೀವನದ ಪಾಠವನ್ನೂ ಕಲಿಸಿದ್ದ. ಅಂದು ಅಮ್ಮ ಸಹ ನನಗೂ ಅದೇ ಪಾಠ ಹೇಳಿಕೊಟ್ಟಳು..

ಆ ಘಟನೆ ನಡೆಯುವಾಗ ನಮ್ಮನೆಯ ಸೂರಿನಲ್ಲಿ ನೆಲಸಿದ್ದ ಗುಬ್ಬಚ್ಚಿಗಳು ಗಾಳಿಮಳೆಗೆ ಉದುರಿದ ಗೂಡಿನ ಹುಲ್ಲನ್ನು ಸರಿ ಪಡಿಸಿ ಮತ್ತೆ ಗೂಡನು ಹೆಣೆಯುವ ಕೆಲಸದಲ್ಲಿ ತೊಡಗಿತ್ತು. ಅಮ್ಮ ನನ್ನನ್ನು ಗೂಡಿನ ಬಳಿಗೆ ಕರೆದುಕೊಂಡು ಹೋಗಿ "ನೋಡು ಮಗು ಗುಬ್ಬಚ್ಚಿಗಳು ಎಷ್ಟೊಂದು ಸುಂದರವಾಗಿ ಗೂಡಿಗೆ ಮತ್ತೆ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಅದು ನೇಯುವ ಕುಶಲ ಕಲೆಯನ್ನು ನೋಡಿಕೊಂಡು ಬಾ, ನಾನು ಸ್ವಲ್ಪ ಅಡಿಗೆ ಕೆಲಸ ಮಾಡುತ್ತಿರುತ್ತೇನೆ. ಆಮೇಲೆ ಹೊಸ ಚಡ್ಡಿ ತರಲು ಹೋಗೋಣ ಆಯ್ತಾ..? ಅದನ್ನೇ ಹಾಕಿಕೊಂಡು ಶಾಲೆಗೆ ಹೋಗುವಿಯಂತೆ" ಅಳುತ್ತಿದ್ದ ನನಗೆ ಅಮ್ಮ ಹೊಸ ಚಡ್ಡಿಯ ಆಸೆಯನ್ನೂ, ನನ್ನ ಪ್ರೀತಿಯ ಗುಬ್ಬಚ್ಚಿಗಳು ಗೂಡನ್ನು ಹೆಣೆಯುವ ಕಲೆಯನ್ನೂ ತೋರಿಸಿ ನನ್ನ ಮನದಲ್ಲಿ ಆಸೆಯನ್ನು ಬಿತ್ತಿದಳು. ನನ್ನ ಮನದಾಸೆಯೂ ಸಹ ಹಕ್ಕಿಯಂತೆ ಹಾರಲಾರಂಬಿಸಿತು..

ಅಮ್ಮ ಎಲ್ಲಾ ಕೆಲಸ ಮುಗಿಸಿ ಹೊಸ ಚಡ್ಡಿಯನ್ನು ಕೊಡಿಸುತ್ತೇನೆಂದು ಕರೆದುಕೊಂಡು ಹೊರಟಳು. ದಾರಿಯುದ್ದಕ್ಕೂ ನನ್ನನ್ನು ಮಾತಿಗೆಳೆದುಕೊಂಡಳು "ಮಗೂ, ಗುಬ್ಬಚ್ಚಿ ಗೂಡನ್ನು ಹೆಣೆಯುವುದು ನೋಡಿದೆಯಾ..?" ಅಮ್ಮನ ಮಾತಿಗೆ ನಾನು "ಹ್ಞೂಂ" ಎಂದು ತಲೆಯಾಡಿಸಿದೆ.
"ಮಳೆಗಾಳಿಗೆ ಕೊಚ್ಚಿ ಹೋಗಿದ್ದ ಗೂಡನ್ನು ಆ ಗುಬ್ಬಚ್ಚಿಗಳು ಎಷ್ಟು ಸುಂದರವಾಗಿ ತೇಪೆ ಹಾಕಿತು ಅಲ್ಲವೇ...? ಹಾಗೆಯೇ ನಮ್ಮ ಜೀವನದಲ್ಲೂ ಮಳೆ ಗಾಳಿಯಂತೆ ಹಲವು ಕಷ್ಟಗಳು ಬರುತ್ತವೆ ಮಗು. ನಾವು ಆಗ ಯಾವುದಕ್ಕೂ ಕುಗ್ಗ ಬಾರದು. ಗುಬ್ಬಚ್ಚಿಯಂತೆ ನಾವೂ ಸಹ ನಮ್ಮ ಕಷ್ಟಗಳಿಗೆ ತೇಪೆ ಹಚ್ಚಿಕೊಂಡೇ ನಡೆಯಬೇಕು. ನಾವೂ ಸಹ ಈಗ ಬಿರುಗಾಳಿಗೆ ಸಿಲುಕಿದ್ದೇವೆ ಮಗು. ನೀನು ಗುಬ್ಬಚ್ಚಿಯಂತೆ ನಿನ್ನ ಹರಿದ ಚಡ್ಡಿಗೆ ತೇಪೆ ಹಚ್ಚಿಕೊಳ್ಳುತ್ತೀಯಾ.. ನಿನಗೆ ಗುಬ್ಬಚ್ಚಿ ಅಂದರೆ ತುಂಬಾ ಇಷ್ಟ ಅಲ್ಲವೇ ? ಅದರಂತೆ ನೀನೂ ಸಹ ಇರುತ್ತೀಯಾ ತಾನೇ ?"

ಗುಬ್ಬಚ್ಚಿ ಅಂದ ಕೂಡಲೇ ನಾನು ಅಮ್ಮನ ಮಾತಿಗೆ ಸುಮ್ಮನೇ 'ಹ್ಞೂ' ಎಂದು ತಲೆಯನ್ನಾಡಿಸಿದೆ. ಯಾಕೆಂದರೆ ನಾನು ಗುಬ್ಬಚ್ಚಿಗಳನ್ನು ತುಂಬಾ ಹಚ್ಚಿಕೊಂಡಿದ್ದೆ. ಅಮ್ಮನಿಗೂ ಅದು ಸರಿಯಾಗಿ ತಿಳಿದಿತ್ತು. ದರ್ಜಿ ನರಸೋಜಿಯ ಬಳಿ ಹೋಗಿ ಅಮ್ಮ ಎಂಟಾಣೆ ಕೊಟ್ಟು ಚಡ್ಡಿಗೆ ತ್ಯಾಪೆ ಹಾಕಿಸಿ ಕೊಟ್ಟಳು..

ನಮ್ಮ ಕಷ್ಟದ ದಿನಗಳಲ್ಲಿ ನಮಗೆ ಜೊತೆಯಾಗಿದ್ದು ಗುಬ್ಬಚ್ಚಿಗಳು. ನಮ್ಮ ಕುಟುಂಬವು ಮೋಸದ ಜಾಲಕ್ಕೆ ಬಿದ್ದು  ವಂಚನೆಗಳಿಗೊಳಗಾಗಿದ್ದರಿಂದ ಬಂಧುಗಳಿಂದ  ಸ್ನೇಹಿತರಿಂದ ಬರುತ್ತಿದ್ದ ಕುಹಕದ ಮಾತುಗಳು ಮತ್ತಷ್ಟು ಮನಸ್ಸನ್ನು ಇರಿಯುತ್ತಿದ್ದವು. ಅಮ್ಮ ಎಲ್ಲರ ಸ್ನೇಹವನ್ನು ತೊರೆದು ನನ್ನ ಹಾಗೆ ಗುಬ್ಬಚ್ಚಿಯ ಜೊತೆಗೆ ಕಾಲ ಕಳೆಯಲಾರಂಬಿಸಿದಳು. ಅತಿಯಾಗಿ ದುಃಖವಾದಾಗ ಗುಬ್ಬಚ್ಚಿಯ ಜೊತೆಗೆ ಮಾತನಾಡುತ್ತಿದ್ದಳು. ಮೊದ ಮೊದಲು ಮನುಷ್ಯರ ಮಾತುಗಳಿಗೆ ಸ್ಪಂದಿಸದ ಗುಬ್ಬಚ್ಚಿಗಳು ನಂತರದ ದಿನಗಳಲ್ಲಿ ಅಮ್ಮನ ಮಾತುಗಳಿಗೆ ಆಸಕ್ತಿಯನ್ನು ತೋರಿಸಿ ತಮ್ಮ ಮುದ್ದು ಮುಖವನ್ನು ಅಮ್ಮನೆಡೆಗೆ ತೋರಿಸಿ ರೆಕ್ಕೆ ಬಡಿಯುತ್ತಿದ್ದವು. ನಮ್ಮ ಕುಟುಂಬಕ್ಕೆ ಗುಬ್ಬಚ್ಚಿಗಳು ತುಂಬಾ ಹತ್ತಿರವಾದವು. ಹಣ ಆಸೆಗೆ ಮೋಸ ಹೋಗಿದ್ದ ನಮ್ಮ ಕುಟುಂಬಕ್ಕೆ ಆದ ನಷ್ಟಕ್ಕಿಂತ ಬಂಧುಗಳು ಸ್ನೇಹಿತರು ಆಡಿಕೊಳ್ಳುವ ಮಾತುಗಳು ಅದಕ್ಕಿಂತ ಕಠೋರವಾಗಿದ್ದವು. ಹಳ್ಳಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು ಎಂಬಂತೆ ನಮ್ಮ ಮೇಲೆ ಜನ ತೋರಿಸುತ್ತಿದ್ದ ಅನಾಸಕ್ತಿಯೇ ನಮಗೆ ಗುಬ್ಬಚ್ಚಿಗಳು ಇನ್ನಷ್ಟು ಹತ್ತಿರವಾಗಿದ್ದವು. ಮಾನವನಿಗಿಂತ ಪಕ್ಷಿಗಳೇ ನಮಗೆ ಹಿತವಾಗಿದ್ದವು. ಅಪ್ಪ ಹಣ ಕಳೆದುಕೊಂಡು ಬೇಸರದಿಂದ ದುಡಿಮೆ ಮಾಡದೇ ಮನೆಯಲ್ಲಿ ಕುಳಿತಾಗ ಅಮ್ಮ ಇದೇ ಗುಬ್ಬಚ್ಚಿ ಗೂಡುಗಳನ್ನು ತೋರಿಸಿ ನನ್ನೊಂದಿಗೆ ಮಾತನಾಡುತ್ತಾ ಅಪ್ಪನಿಗೆ ಪ್ರೋತ್ಸಾಹ ತುಂಬುತ್ತಿದ್ದಳು.

"ಪಕ್ಕ.... ನೋಡು ಈ ಗುಬ್ಬಚ್ಚಿಗಳನ್ನು ಎಷ್ಟು ಅನ್ಯೋನ್ಯವಾಗಿ ಇರ್ತಾವಲ್ಲ. ಮೊನ್ನೆ ಬೆಕ್ಕು ಹೊಂಚಿ ಹಾಕಿ ಕುಳಿತಾಗ ಗುಬ್ಬಚ್ಚಿಯು ತನ್ನ ಗೂಡು ಸುಲಭವಾಗಿ ಶತೃಗಳಿಗೆ ಸಿಗಬಾರದೆಂದು ಮತ್ತೊಂದು ಕಡೆ ಗೂಡು ಕಟ್ಟುತ್ತಿದೆ ನೋಡು. ಹೊಸದಾಗಿ ಗೂಡು ಕಟ್ಟುವುದೆಂದರೆ ಸಾಮಾನ್ಯ ಕೆಲಸವೇನಲ್ಲ. ಹೊಸದಾಗಿ ಹುಲ್ಲು ಕಡ್ಡಿಗಳನ್ನು ಹುಡುಕಿ ತರಬೇಕು. ದುಷ್ಟರಿಂದ ರಕ್ಷಿಸಲು ಸೂಕ್ತ ಜಾಗ ಹುಡುಕಿಕೊಳ್ಳಬೇಕು. ಎಂತ ಅಪಾಯಗಳಿಗೂ ಜಗ್ಗದೇ ಕುಗ್ಗದೇ ಬದುಕುತ್ತಿವೆ ನೋಡು. ಕಷ್ಟ ಅಂತ ಬಂದಾಗ ಕುಗ್ಗುವುದು ಮನುಷ್ಯನೊಬ್ಬನೇ ಅಂತ ಕಾಣುತ್ತೆ. ಮಳೆ ಗಾಳಿಗೆ ಗೂಡು ನಾಶವಾದಾಗ ಕೊರಗಿದ್ದನ್ನು ನಾನು ಕಾಣಲಿಲ್ಲ. ಈ ಕಷ್ಟಗಳೆಂಬ ಮಳೆಗಾಳಿಯನ್ನು ಎದುರಿಸಿ ನಿಲ್ಲವಂತೆ ಮನುಷ್ಯ ಸಹ ಕಷ್ಟಗಳಿಗೆ ಎದೆಯೊಡ್ಡಿ ನಿಂತಾಗ ಮಾತ್ರ ಗುಬ್ಬಚ್ಚಿಗಳಂತೆ ಹೊಸದೊಂದು ಗೂಡು ಕಟ್ಟಿಕೊಳ್ಳಬಲ್ಲ"

ಅಮ್ಮ ಹೇಳಿದ ಈ ಮಾರ್ಮಿಕ ನುಡಿಗಳು ಅಂದು ನನಗೆ ಅರ್ಥವಾಗಲೇ ಇಲ್ಲ. ಸುಮ್ಮನೆ 'ಹೂಂ..' ಎಂದು ತಲೆ ಅಲ್ಲಾಡಿಸಿದೆ. ಆದರೆ ಅಪ್ಪ ಮಾತ್ರ ಅಮ್ಮನ ಮಾತುಗಳನ್ನು ಕೇಳಿ ಎದ್ದು ಹೊಲದ ಕಡೆಗೆ ಹೊರಟಿದ್ದ..

ಅಂದು ಮತ್ತೆ ನಮ್ಮ ಕುಟುಂಬಕ್ಕೆ ಹೊಸದಾದ ಗೂಡು ನಿರ್ಮಿಸಿದ್ದ. ಪಟೇಲನ ಹತ್ತು ಎಕರೆ ಹೊಲವನ್ನು ಕಾಳು ಗುತ್ತಿಗೆಗೆ ಪಡೆದುಕೊಂಡು ಕಷ್ಟಪಟ್ಟು ದುಡಿದ. ನಮ್ಮನ್ನೆಲ್ಲಾ ಕಷ್ಟಪಟ್ಟು ಓದಿಸಿದ ಅದರ ಪ್ಪತಿಫಲ ಇಂದು ನಾನು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಜೊತೆಗೆ ಆರಂಕಿಯ ಸಂಬಳ..

ಬಾಲ್ಯದ ಅಂದಿನ ಈ ಘಟನೆ ಮತ್ತೆ ನೆನಪಾದದ್ದು ಮೊನ್ನೆ ದಿನ ... ರಾತ್ರಿ ಊಟಮಾಡಿ ಮಲಗಿದ್ದೆ. ರಾತ್ರಿ ಸುಮಾರು ಒಂದು ಗಂಟೆಯಾಗಿರಬಹುದು. ನನ್ನ ಮೊಬೈಲ್ ಚಿಕ್ಕದಾಗಿ ರಿಂಗಣಿಸಿತು. ನಿದ್ದೆ ಕಣ್ಣಿನಿಂದಲೇ ಮೊಬೈಲನ್ನು ಎತ್ತಿಕೊಂಡೆ. ನನ್ನ ಮೈಲ್ ಇನ್ ಬಾಕ್ಸ ನಲ್ಲಿ ಹೊಸದೊಂದು ಮೇಲ್ ಬಂದಿತ್ತು. ಅದರಲ್ಲಿ "ನಾನು ಎಡ್ವಿನ್ ರಾಸೋ..... ಇಂಡಿಯಾದವನು, ಎನ್,ಆರ್,ಐ. ಈಗ ಅಮೇರಿಕಾದಲ್ಲಿರುವೆ.... ನನ್ನ ಅಂಕೌಟ್ ನಲ್ಲಿರುವ ಹತ್ತು ಕೋಟಿ ಹಣವನ್ನು ನಿಮಗೆ ವರ್ಗಾಯಿಸಬೇಕೆಂದಿದ್ದೇನೆ.... ಇಲ್ಲಿ ನನಗೆ ತೆರಿಗೆ ಕಟ್ಟುವ.... ಬ್ಲ್ಯಾಕ್ ಹಣ ಹೊಂದಿದ ,.ಇತ್ಯಾದಿ ತರಹದ ಸಮಸ್ಯೆಗಳಿವೆ. ನೀವು ಹಣ ವರ್ಗಾಯಿಸಲು ನಿಮ್ಮ ಬ್ಯಾಂಕ್ ನ ಡಿಟೈಲ್ಸ ನನಗೆ ಮೇಲ್ ಮಾಡಿ... ನನಗೆ ಸಹಾಯ ಮಾಡಿದರೆ ಶೇ ಐವತ್ತು ಹಣ ನಿಮಗೂ ಸಿಗುತ್ತದೆ"
ಈ ಮೇಲ್ ಓದಿದ ಕೂಡಲೆ ನನಗೆ ಸಂತೋಷವಾಯಿತು.
ಐದು ಕೋಟಿ ಹಣ ನನ್ನದಾಗುತ್ತದೆಯೆಂದು ನಾನು ಕಲ್ಪನಾ ಲೋಕದಲ್ಲಿ ತೇಲಿ ಹೋದೆ... ಹಾಗೆಯೇ ಮತ್ತೆ ನಿದ್ರೆ ಆವರಸಿತು. ಅದೇ ನೆನಪಲ್ಲಿ ಮಲಗಿದ್ದರಿಂದ ರಾತ್ರಿ ಕನಸಿನಲ್ಲಿ ದೊಡ್ಡದಾದ ಬಂಗಲೆಯಲ್ಲಿ ವಾಸವಾಗಿದ್ದೆ. ಆಳು ಕಾಳುಗಳು ನನ್ನ ಸೇವೆಯಲ್ಲಿ ನಿರತರಾಗಿದ್ದರು. ನಾಲ್ಕೈದು ಕಾರುಗಳು ನನ್ನ ಮನೆಯ ಮುಂದೆ ನಿಂತಿದ್ದವು.

ಬೆಳಗ್ಗೆಯಾಯಿತು. ಇನ್ನೂ ರಾತ್ರಿ ಬಂದ ಮೇಲ್ ಬಗ್ಗೆನೇ ಯೋಚಿಸುತ್ತಿದ್ದೆ. ತಕ್ಷಣ ಆ ವ್ಯಕ್ತಿಗೆ ನನ್ನ ಬ್ಯಾಂಕಿನ ಸಂಪೂರ್ಣ ಮಾಹಿತಿ ನೀಡಲು ಮುಂದಾದೆ. ಕಿಟಕಿಯಲ್ಲಿ ಗುಬ್ಬಚ್ಚಿಯೊಂದು ಪಟ ಪಟ ರೆಕ್ಕೆ ಬಡಿದು ಸದ್ದು ಮಾಡಿತು. ತಕ್ಷಣ ನನ್ನ ನೆನಪಿಗೆ ಬಂದಿದ್ದು ನನ್ನೂರಿನ ನನ್ನ ಗುಬ್ಬಚ್ಚಿಗಳು..... ಆ ದಿನ ಅಮ್ಮ ಹೇಳಿದಂತೆ

"ದುರಾಸೆ ಪಟ್ಟು ಇನ್ನೊಬ್ಬರ ಸಹಾಯಕ್ಕೆ ಹಾತೊರೆಯುವುದು ಮನುಷ್ಯನೇ ಹೊರತು ಗುಬ್ಬಚ್ಚಿಗಳಲ್ಲ."

ಎಂಬ ಮಾತುಗಳು ಸಹ ನೆನಪಿಗೆ ಬಂದಿತು. ಅಪ್ಪ ಇದೇ ರೀತಿ ಹತ್ತು ಸಾವಿರ ರೂಪಾಯಿಗಳನ್ನು ಕಳೆದು ಕೊಂಡಿದ್ದು ಕಣ್ಣ ಮುಂದೆಯೇ ಬಂದು ಹೋಯಿತು. ಯಾರೋ ಕೊಡುವ ಐದು ಕೋಟಿಗೆ ಆಸೆ ಪಟ್ಟು ಕಷ್ಟ ಪಟ್ಟು ದುಡಿದು ಸಂದಾದಿಸಿದ ಹಣ ಕಳೆದು ಕೊಳ್ಳುವುದು ಬೇಡವೆನಿಸಿತು. ಗುಬ್ಬಚ್ಚಿಗಳಂತೆ ಕಷ್ಟ ಪಟ್ಟು ದುಡಿದು ಗಳಿಸಬೇಕು ಎಂದುಕೊಂಡೆ. ಇದೇ ದುರಾಸೆಯ ಯೋಚನೆಯಲ್ಲಿದ್ದ ನಾನು ಅದರಿಂದ ಹೊರ ಬರಲು ಎಫ್,ಎಂ, ರೇಡಿಯೋ ಆನ್ ಮಾಡಿದೆ... ಸುಂದರವಾದ ಗೀತೆಯೊಂದು ನನ್ನ ಮನಸ್ಸನ್ನು ಮುದಗೊಳಿಸಿತು

"ಮನದಾಸೆ ಹಕ್ಕಿಯಾಗಿ ಮುಗಿಲಾಗೆ ತೇಲಿ ತೇಲಿ, ಬನದಾಗೆ ಸುತ್ತಿ ಸುಳಿದು ಬಯಲಾಗೆ ಮೀಗಿ ಮೀಗಿ......."
ಈ ಹಾಡು ಕೇಳಿ ಮತ್ತೆ ಗುಬ್ಬಚ್ಚಿಗಳು ನೆನಪಾದವು. ಗುಬ್ಬಚ್ಚಿ ಗೂಡಿನಂತಿರುವ ನನ್ನ ಸುಂದರ ಸಂಸಾರದಲ್ಲಿ ದರಾಸೆಯಿಂದಲೂ.... ಮೋಸದ ಜಾಲದಿಂದಲೂ ಕೂಡಿದ ಈ ತರಹದ ಹಣಕ್ಕೆ ಆಸೆ ಪಡಬಾರದೆಂದುಕೊಂಡೆನು......

No comments:

Post a Comment