Friday, 5 February 2016

ದೆವ್ವದ ರಾತ್ರಿ

ದೆವ್ವದ ರಾತ್ರಿ....

ಸೆಕೆಂಡ್ ಷೋ ಸಿನಿಮಾ ಬಿಟ್ಟಾಗ ರಾತ್ರಿ ಒಂದು ಗಂಟೆಯಾಗಿತ್ತು. ಜನರ ಗುಂಪಿನಲ್ಲಿ ಸ್ವಲ್ಪ ದೂರ ಮಾತ್ರ ನಡೆದು ಬಂದೆ ಆಮೇಲೆ ರಸ್ತೆಯ ಬಲ ತಿರುವಿನಲ್ಲಿಯ ಚಿಕ್ಕದಾದ ಕಲ್ಲು ಮಣ್ಣಿನ ದಾರಿಯಲ್ಲಿ ನಮ್ಮ ಮನೆ ತಲುಪಲು ಅರ್ದ ಕಿಲೋ ಮೀಟರ್ ನಡೆಯಬೇಕಿತ್ತು. ಆಗ ಇದ್ದಿದ್ದು ನಾನೊಬ್ಬನೇ.. ನನ್ನ ಜೊತೆ ಯಾರಾದರೂ ಬರಬಹುದೇ ಎಂದು ಸ್ವಲ್ಪ ಹೊತ್ತು ಕಾದು ನಿಂತೆ. ನನ್ನ ದುರಾದೃಷ್ಟಕ್ಕೆ ಆ ದಿನ ನಮ್ಮ ಏರಿಯಾದ ಯಾವ ನರಪಿಳ್ಳೆಯೂ ಸಹ ಸಿನಿಮಾ ನೋಡೋಕೆ ಬಂದಿರಲಿಲ್ಲ. ಅನಿವಾರ್ಯವಾಗಿ ಒಬ್ಬನೇ ನಡೆಯಬೇಕಿತ್ತು. ಒಬ್ಬನೇ ಹೋಗುವುದನ್ನು ನೆನಪಿಸಿಕೊಂಡ ಕೂಡಲೇ ಕೈಕಾಲು ನಡುಗಲಾರಂಭಿಸಿತು. ನಮ್ಮನೆಯಲ್ಲಿ ಸ್ವಲ್ಪ ಪುಕ್ಕಲು ಸ್ವಭಾವದವನೆಂದರೆ ನಾನೊಬ್ಬನೆ. ರಾತ್ರಿ ಉಚ್ಚೆ ಹೊಯ್ಯಲು ಹೊರ ಬರಬೇಕಾದರೂ ಅಪ್ಪನನ್ನು ಎಬ್ಬಿಸುತ್ತಿದ್ದೆ. ನಾನು ಸಿನಿಮಾಗೆ ಹೊರಟಾಗ ನನ್ನ  ಸ್ವಭಾವ ಅರಿತ್ತಿದ್ದ ನಮ್ಮಮ್ಮ ಒಬ್ಬನೇ ಹೋಗಬೇಡ್ವೋ.. ಮೊದ್ಲೇ ನೀನು ಪುಕ್ಲು ಪುಕ್ಲು ತರ ಆಡ್ತೀಯಾ ಅಂತ ಎಚ್ಚರಿಸಿದ್ದಳು. ಅಯ್ಯೋ ಬಿಡಮ್ಮ ನಮ್ ಏರಿಯಾದಿಂದ ಯಾರಾದ್ರೂ ಬಂದೇ ಇರ್ತಾರೆ ಅವ್ರ ಜೊತೆ ವಾಪಸ್ ಬರ್ತೀನಿ ಅಂತ ಧೈರ್ಯದಿಂದ ಹೇಳಿ ಹೋಗಿದ್ದೆ....
ಆದರೆ ಸಿನಿಮಾ ನೋಡಿ ಹಿಂದಿರುವಾಗ ಒಂಟಿಯಾಗಿ ನಡೆಯಬೇಕಿತ್ತು. ದೆವ್ವ ಏನಾದರೂ ಅಡ್ಡಗಟ್ಟಿದರೆ..? ಮನಸು ಭಯಗೊಂಡಿತು
ದಾರಿಯೇ ಕಾಣದಂತಿರುವ ಆ ಘನ ಘೋರ ಕತ್ತಲನ್ನು ಬೇಧಿಸಿಕೊಂಡು ನಮ್ಮನೆಯ ದಾರಿಯನ್ನು ತುಳಿದೆ.  ಸುತ್ತಲೂ ಕಗ್ಗತ್ತಲು ತುಂಬಿತ್ತು. ಮುಂದಿರುವ ರಸ್ತೆ ಅಸ್ಪಷ್ಟವಾಗಿ ಕಾಣುತ್ತಿತ್ತು. ದಟ್ಟ ರಾತ್ರಿಯಲ್ಲೂ "ಘೀ" ಎನ್ನುವ ನೀರವ ಸದ್ದು ಕಿವಿಗೆ ಕೇಳಿಸುತ್ತಿತ್ತು. ಜೊತೆಗೆ ಕಪ್ಪೆಗಳು ವಟಗುಟ್ಟುವ ಶಬ್ಧ ಬೇರೆ...!

"ಸರ್...ರ್...... ಸರ್...ರ್.."

ಏನೋ ಕಾಲ ಬುಡದಲ್ಲಿ ಸದ್ದಾಯಿತು. ಹೆದರಿ ತಕ್ಷಣ ಮಾರುದ್ದ ಜಿಗಿದೆ. ಒಂದು ಕ್ಷಣ ಜೀವವೇ ಹೋದಂತಾಯಿತು. ಬೇಗ ಬೇಗ ಹೆಜ್ಜೆ ಹಾಕಿದೆ. ನನ್ನ ಎದೆ ಬಡಿತ ಇನ್ನೇನು ಸಹಜ ಸ್ಥಿತಿಯತ್ತ ತಲುಪುತ್ತಿದೆ ಎಂದುಕೊಳ್ಳುತ್ತಿರುವಾಗಲೇ ದೂರದಿಂದ ಗೆಜ್ಜೆಯ ಸದ್ದು ಕೇಳಿಸಲಾರಂಭಿಸಿತು

"ಘಲ್.... ಘಲ್... ಘಲ್..."

ಯಾರೋ ನಡೆದು ಬರುತ್ತಿರುವಂತೆ ಭಾಸವಾಯಿತು. ಹಿಂದಿರುಗಿ ನೋಡುವ ಧೈರ್ಯ ಬರಲಿಲ್ಲ. ನನ್ನ ಉಸಿರಿನ ವೇಗ ಹೆಚ್ಚಾಯಿತು. ನನ್ನ ಎದೆ ಬಡಿತದ ಸದ್ದು ನನಗೇ ನಗಾರಿ ಬಡಿದಂತೆ ಕೇಳಿಸಿತು. ತಂಪು ರಾತ್ರಿಯಲ್ಲೂ ಬೇವರಿನ ಹನಿ ಹಣೆಯ ಮೇಲಿಂದ ಇಳಿಯಲಾರಂಭಿಸಿತು. ಯಾರೋ ಹಿಂದಿನಿಂದ ನಡೆದು ಬಂದಂತೆ ಭಾಸವಾಯಿತು. ತಕ್ಷಣ ಯಾರೋ ಹೆಗಲಮೇಲೆ ಕೈಯಿಟ್ಟರು. ನನಗೆ ಜೀವವೇ ಹೋದಂತಾಯಿತು. ಚಳಯಲಿ ಮೈ ಬೆವರಿ ಇನ್ನಷ್ಟು ಬೆವರಿತು. ಉಸಿರು ಬಿಗಿ ಹಿಡಿದುಕೊಂಡು ಹಿಂದಕ್ಕೆ ತಿರುಗಿ ನೋಡಿದೆ.

"ಮೋಹಿನೀೕೕ.... . "
ಆಕೆಯ ರೂಪ ಕಂಡು ಭಯ ತಡೆಯಲಾರದೇ ಕೂಗಿಕೊಂಡೆ.

ನನ್ನ ಹಿಂದೆ ಮೋಹಿನಿ ತನ್ನ ವಿಕಾರ ರೂಪ ತೋರಿ ನಿಂತಿದ್ದಳು. ಉದ್ದವಾದ ಹರಡಿದ ಕೂದಲುಗಳಿಂದ ಮುಖ ಅರೆ ಮುಚ್ಚಿ ಹೋಗಿತ್ತು. ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು.ನಾಲಿಗೆ ಬಾಯಿಂದ ಹೊರಚಾಚಿತ್ತು. ಕೋರೆ ಹಲ್ಲುಗಳು ಹನಿ ಹನಿ ರಕ್ತ ಸೋರಿಸುತ್ತಿದ್ದವು.ಬಿಳಿ ಉಡುಪಿನ ಸೀರೆ ರಕ್ತದಿಂದಲೇ ಅರ್ದ ಕೆಂಪಾಗಿ ಹೋಗಿತ್ತು. ಈ ಭಯಾನಕ ರೂಪ ನೋಡಿ ಕಾಲುಗಳು ಕುಸಿದು ಬಿದ್ದವು. "ಮೋಹಿನಿ.... ಮೋಹಿನಿ..." ಎನ್ನುತ್ತಾ ನೆಲಕ್ಕೆ ದೊಪ್ಪನೆ ಉರುಳಿ ಬಿದ್ದೆ ಮುಂದೇನಾಯಿತೋ ನನಗೆ ನೆನಪಿಲ್ಲ....
ಕಣ್ಣು ಬಿಟ್ಟು ನೋಡಿದಾಗ ಆಸ್ಪತ್ರೆಯಲ್ಲಿ ಮಲಗಿದ್ದೆ. ನನ್ನ ಗೆಳೆಯ ತಿಪ್ಪ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದ. ಜ್ವರ ಹೆಚ್ಚಾಗಿ ಕೈ ಕಾಲುಗಳು ನಡುಗುತ್ತಿದ್ದವು. ನಿದಾನವಾಗಿ ಕಣ್ಣು ತೆರೆದು ಸುತ್ತಲೂ ನೋಡಿದೆ. ರುದ್ರ, ಶಂಕ್ರ ಕುಮ್ಮಿ,, ಮುಂತಾದ ಗೆಳೆಯರು ನನ್ನ ನೋಡಲು ಬಂದಿದ್ದರು. ನನ್ನ ಪಕ್ಕದಲ್ಲಿ ಸುಮ, ಕೀರ್ತಿ. ಪದ್ಮಿ ಕೂಡ ನನ್ನ ನೋಡಲು ಬಂದಿದ್ದರು  ಅವರ ಪಕ್ಕದಲ್ಲಿ ಮತ್ತೊಬ್ಬಳು..
'ಅರೆ.... ಅವಳೇ...!!! ಮೋಹಿನಿ...!!!'
ರಾತ್ರಿ ನೋಡಿದ ದೆವ್ವದ ರೂಪದಲ್ಲಿದ್ದವಳು ಅದೇ ಮೋಹಿನಿ...!!!
 ಆದರೆ ಈಗ ದೆವ್ವದ ರೂಪ ಧರಿಸಿರಲಿಲ್ಲ,... ಕೂದಲನ್ನು ಸುಂದರವಾಗಿ ಕಟ್ಟಿದ್ದಳು. ಕಣ್ಣುಗಳಿಗೆ ಕಾಡಿಗೆಯನ್ನು ತಿದ್ದಿ ಸುಂದರಗೊಳಿಸಿದ್ದಳು. ಯಾವ ಕೋರೆ ಹಲ್ಲೂ ಇರಲಿಲ್ಲ. ದೆವ್ವಕ್ಕೆ ವ್ಯತಿರಿಕ್ತವಾದ ಸುಂದರ ರೂಪ ಧರಿಸಿ ಮೇನಕೆಯಂತೆ ಕಣ್ಣ ಮುಂದೆ ಕಂಗೊಳಿಸುತ್ತಿದ್ದಳು. 

ಮೋಹಿನಿ ನನ್ನ ಕಾಲೇಜಿನ ಪ್ರಿಯ ಗೆಳತಿ. ಅವಳನ್ನು ನೋಡಿದಾಗಲೆಲ್ಲ ನನ್ನ ಮನಸಿನಲ್ಲಿ ಏನೋ ಒಂಥರಾ.. ಏನೋ ಆಹ್ಲಾದ ಭಾವ ಆವರಿಸಿಕೊಂಡು ಬಿಡುತ್ತಿತ್ತು. ನನ್ನ ಮಂದೆಯೇ ಕಾಣುತ್ತಿದ್ದ ಆ ಮುದ್ದಾದ ರೂಪ ಕಂಡ ಕೂಡಲೇ ಮನದೊಳಗೆ ಆವರಿಸಿದ್ದ ಆ ಭಯ ಕಡಿಮೆಯಾಗಲಾರಂಭಿಸಿತು. ಕಾಲೇಜಿನಲ್ಲಿ ಆಕೆಯ ನಗು ಕಂಡಾಗ ಎಷ್ಟೋ ಸಲ ನನ್ನನ್ನೇ ನಾನು ಮರೆತು ಯಾವುದೋ ಲೋಕದಲ್ಲಿ ತೇಲಿಹೋಗುತ್ತಿದ್ದೆ. ಆಕೆಯ ಕೇಶರಾಶಿ ಗಾಳಿಯಲ್ಲೊಮ್ಮೆ ಹಾರಾಡಿದರೆ ಸಾಕು ನನ್ನ ಎದೆ ಝಲ್ಲೆನ್ನುತ್ತಿತ್ತು. ಆಕೆಯ ಮುದ್ದು ಮೊಗ ನೋಡಿದ ಕೂಡಲೇ ನಾನು ದುಂಬಿಯಾಗಿ ಅತ್ತ ಸುಳಿಯಬಾರದೇಕೆ ಎಂದೆನಿಸುತ್ತಿತ್ತು. ಅವಳ ಕಣ್ಣ ಕಾಂತಿಯೋ......? ಆಕೆಯ ಎದುರು ನಿಂತ ನನಗೆ ಮಿಂಚು ಹೊಡೆದಂತಾಗುತ್ತಿತ್ತು. ಎಂತಹ ಸೌಂದರ್ಯ....!!! ಎಂತಹ ಅದ್ಭುತ ಶಿಲ್ಪ...!! ಮೋಹಿನಿಯನ್ನು ಈ ರೀತಿಯಾಗಿ ಸುಂದರವಾಗಿ ಸೃಷ್ಟಿಸಿದ ಆ ದೇವರಿಗೆ ಎಷ್ಟೋ ಸಲ ಮನದಲ್ಲೇ ಕೃತಜ್ಞತೆ ಹೇಳಿದ್ದೆ.

ಹೀಗಿರುವಾಗ ರಾತ್ರಿ ದೆವ್ವದ ರೂಪ ಧರಿಸಿ ನನ್ನನ್ನು
ಹೆದರಿಸಿದ್ದು ಇವಳೇನಾ..? 
ಮನದೊಳಗೆ ಅರಿಯದ ಸಂಶಯ
ಇವಳೇಕೆ ಹೆದರಿಸುವಳು..?
ಇವಳ ರೂಪ ಧರಿಸಿ ಬಂದ ಆ ಭೂತ ಯಾವುದು..? ಹೀಗೆ ಹಲವು ಪ್ರಶ್ನಗಳು ನನ್ನನ್ನು ಕಾಡಿತು.
ಕಾಲೇಜಿನಲ್ಲಿ ನನ್ನ ಮತ್ತು ಆಕೆಯದು ಒಳ್ಳೆಯ ಗೆಳೆತನ. ಒಂದೊಂದು ಸಲ ಆ ಗೆಳೆತನ ಪ್ರೕಿತಿಗೆ ತಿರುಗಿದೆಯೆನೋ ಎಂಬಂತೆ ನನಗೆ ಅನುಮಾನವಾಗುತ್ತಿತ್ತು.

"ಪ್ಲೀಸ್ ... ಐದು ನಿಮಿಷ ಎಲ್ಲರೂ ಹೊರಗೆ ಹೋಗಿ ಪೇಷೆಂಟ್ ನೋಡಲಿಕ್ಕೆ ಡಾಕ್ಟರ್ ಬರುತ್ತಿದ್ದಾರೆ"

ನರ್ಸ್ ಎಲ್ಲರಿಗೂ ಕಳುಹಿಸಿದಳು. 
ಗೆಳೆಯರೆಲ್ಲರೂ ಹೊರಟರು. ಮೋಹಿನಿಯೂ ಅವರೊಂದಿಗೆ ಹೋದಳು. ಡಾಕ್ಟರ್ ಬಂದು ಹೋದ ನಂತರ ತಿಪ್ಪ ಒಬ್ಬನೇ ಬಂದನು.

"ಗೆಳೆಯರೆಲ್ಲಾ ಎಲ್ಲೋ...?" ಎಂದೆ

"ಕ್ಯಾಂಟೀನಲ್ಲಿ ಕಾಫಿ ಕುಡಿತಿದಾರೆ" ಎಂದನು.

ನನ್ನ ಕಣ್ಣುಗಳು ಮೋಹಿನಿಯ ಬರುವುದನ್ನೇ ಕಾಯುತ್ತಿದ್ದವು..

"ನೆನ್ನೆ ಯಾಕೊ ಅಷ್ಟೊಂದು ಹೆದರಿದ್ದೆ"
ತಿಪ್ಪ ನನ್ನ ಪ್ರಶ್ನಿಸಿದ.

"ನೆನ್ನೆ ರಾತ್ರಿ ಮನೆಕಡೆ ಬರೋವಾಗ ಈಗ ನನ್ನ ನೋಡಳು ಬಂದಿದ್ದಾಳಲ್ಲಾ  ನನ್ನ ಗೆಳತಿ ಮೋಹಿನಿ... ಇವಳೇ ನನಗೆ ಭೂತವಾಗಿ ಕಾಡಿದಳು. ಇವಳೇನಾದರು ನನಗೆ ತಮಾಷೆ ಮಾಡಲು ಈ ರೀತಿ ಮಾಡಿರುವಳೇ..?" ಎಂದೆ

"ಛೆ.....!! ಪಕ್ಕ ...ಏನ್ ಹೇಳ್ತಿದಿಯಾ ಅವರ ಮನೆ ಇರೋದು ಮೂರು ಕಿಲೋ ಮೀಟರ್ ದೂರ. ಒಂಟಿ ಹುಡುಗಿ ಆ ರೀತಿ ಹೆದರಿಸಲು ಸಾದ್ಯವೇ ಇಲ್ಲ... ಅದೂ ಈ ಅಮವಾಸ್ಯೆ ರಾತ್ರಿಲಿ"

ತಿಪ್ಪನ ಹಾಗೆ ಹೇಳಿದಾಗ ಅವನ ಮಾತು ಸರಿಯೆನಿಸಿತು......

"ನೆನ್ನೆ ...ನಿನ್ನ ಮತ್ತು ಮೋಹಿನಿ ನಡುವೆ ಏನಾದರು ಘಟನೆ ನಡಿತಾ..? ಅಂದರೆ ಮೋಹಿನಿಯ ಬಗ್ಗೆ ಅಸಹಜವಾದ ವಿಷಯಗಳು... ಈ ಕರಹದ್ದೇನಾದರೂ...?
ತಿಪ್ಪ ಕುತೂಹಲದಿಂದ ವಿಚಾರಿಸಿದ.

ನಾನು 'ಇಲ್ಲ' ಎಂದೆ...

"ಸರಿಯಾಗಿ ಯೋಚಿಸಿ ಹೇಳು... ನಿನ್ನ ಮನಸಿನಲ್ಲೆಲ್ಲಾ ಮೋಹಿನಿ ತಂಬಿಕೊಂಡಿದಾಳೆ ಅಂತ ನನಗೆ ಗೊತ್ತು" ಎಂದ

ತಿಪ್ಪನ ಮಾತು ಸರಿಯಾಗಿತ್ತು. ನನಗೆ ಮೋಹಿನಿ ಎಂದರೆ ಪ್ರಾಣ. ಈ ವಿಷಯ ಎಲ್ರಿಗೂ ತಿಳಿದಿತ್ತು. ನಾನು ಕುಮ್ಮಿ ಎಲ್ರೂ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಪಾಸಾಗಿ ಒಳ್ಳೆ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದೆವು. ಆದರೆ ನಮ್ಮ ಗುಂಪಿನಲ್ಲಿ ಮೋಹಿನಿಗೆ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಮೋಹಿನಿಯ ಅಪ್ಪನಿಗೆ ತುಂಬಾ ಬೇಸರವಾಗಿತ್ತು. ಅವರಪ್ಪ ಸ್ವಲ್ಪ ಮೂಡನಂಬಿಕೆಯವನು. ಮೋಹಿನಿಗೆ ಯಾವುದೋ ದೆವ್ವದ ಕಾಟ ಇರೋದ್ರಿಂದ ಕೆಲಸ ಸಿಗ್ತಾಯಿಲ್ಲ. ಮೋಹಿನಿ ಐದನೇ ಕ್ಲಾಸ್ ಓದುವಾಗ ಯಾವುದೋ  ದೆವ್ವ ಮೆಟ್ಕೊಂಡಿತ್ತಂತೆ.. ಕ್ಯಾಂಪಸ್ ನಲ್ಲಿ ಸೆಲೆಕ್ಷನ್ ಆಗದಿದ್ದಕ್ಕೆ ಅವರಪ್ಪ ಮತ್ತೆ  ಯಾವುದೋ ದೆವ್ವದ ಕಾಟ ಎಂದು ತಿಳಿದು ಕಳೆದ ಅಮವಾಸ್ಯೆಯಲ್ಲಿ ಮೋಹಿನಿಗೆ ದೆವ್ವ ಬಿಡಿಸಲು ಉಕ್ಕಡ ಗಾತ್ರಿಗೆ ಕರೆದುಕೊಂಡು ಹೋಗಿದ್ದನಂತೆ. ಅಲ್ಲಿ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿ. ಅಜ್ಜಯ್ಯನ ಸಮ್ಮುಖದಲ್ಲಿ ದೆವ್ವ ಬಿಡಿಸಿದ್ದನಂತೆ. ಮೋಹಿನಿ ಬೇಡ ಬೇಡವೆಂದರೂ ಅವರಪ್ಪ ಕೇಳಲಿಲ್ಲವಂತೆ. ಈಗ ಮೋಹಿನಿಗೆ ಮತ್ತೆ ದೆವ್ವ ಹಿಡಿದಿರಬೇಕು. ಅವಳ ಸ್ನೇಹ ಮಾಡಿದ್ದರಿಂದ ನನಗೂ ರಾತ್ರಿ ದೆವ್ವವು ಮೋಹಿನಿ ರೂಪದಲ್ಲಿ ಬಂದು ನನಗೂ ಕಾಡಿತು

ಎಲ್ಲವನ್ನು ಸವಿವರವಾಗಿ ತಿಪ್ಪನಿಗೆ ಹೇಳಿದೆ.

ತಿಪ್ಪ ಒಮ್ಮೆ ಜೋರಾಗಿ ನಕ್ಕ. 
ನಾನು " ಯಾಕೋ ನಗ್ತಿಯಾ" ಎಂದೆ

"ಯಾವ್ ದೆವ್ವನೂ ಇಲ್ಲ... ಏನೂ ಇಲ್ಲ. ಎಲ್ಲಾ ನಿನ್ನ ಭ್ರಮೆ. ನಿನ್ನೆ ರಾತ್ರಿ ನೀನು ಸಿನಿಮಾ ನೋಡಿಕೊಂಡು ಮನೆಯ ಕಡೆ ಹೋಗುತ್ತಿರುವುದನ್ನು ನಾನು ನೋಡಿದೆ... ನನಗೆ ನಿದ್ದೆ ಬಂದಿರಲಿಲ್ಲ. ಹೊಸ ವರ್ಷ ಅಂತ ನನ್ನ ತಂಗಿ ನಮ್ಮ ನಾಯಿ ಜಿಮ್ಮಿ ಕೊರಳಲ್ಲಿ ಗೆಜ್ಜೆ ಕಟ್ಟಿದ್ದಳು. ರಾತ್ರಿ ಮಲಗುವಾಗ ತೆಗೆಯೋದು ಮರೆತ್ತಿದ್ದಳು.. ಜಿಮ್ಮಿ ಎಚ್ಚರವಾದಾಗಲೆಲ್ಲಾ ಗೆಜ್ಜೆ ಸದ್ದು ಕೇಳಿಸುತ್ತಿತ್ತು. ನನಗೂ ಈ ಸದ್ದಿನಿಂದ ಸರಿಯಾಗಿ ನಿದ್ದೆ ಬರಲಿಲ್ಲ. ರಾತ್ರಿ ಎದ್ದು ಜಿಮ್ಮಿ ಕೊರಳಿಂದ ಗೆಜ್ಜೆ ತೆಗೆಯುವಾಗ ನೀನು ಕಾಣಿಸಿದೆ. ಪ್ರಕಾಶ್...ಲೋ ಪಕ್ಕಾ... ಎಂದು ಕೂಗಿ ಕೊಂಡೆ. ನೀನು ನಡೆದು ಹೋಗುತ್ತಲೇ ಇದ್ದೆ. ನಿನ್ನ ಹಿಂದೆ ಓಡಿ ಬಂದೆ. ನನ್ನ ಹಿಂದೆ ನಾಯಿನೂ ಓಡಿ ಬಂತು. ಕೊರಳಲ್ಲಿ ಗೆಜ್ಜೆ ಇರೋದರಿಂದ ನೀನು ಯಾರೋ ಹೆಣ್ಣು ದೆವ್ವ ಹಿಂಬಾಲಿಸಿಕೊಂಡು ಬರುತ್ತಿದೆ ಅನ್ಕೊಂಡಿರಬೇಕು. ನಾನು ಹತ್ತಿರ ಬಂದು ನಿನ್ನ ಮುಟ್ಟಿದ ಕೂಡಲೇ ನನ್ನ ಮುಖವನ್ನೂ ಸರಿಯಾಗಿ ನೋಡದೇ ಮೋಹಿನೀೕೕ... ಅಂತ ಕಿರುಚುತ್ತಾ.ಕೂಡಲೇ ಕುಸಿದು ಬಿದ್ದು ಬಿಟ್ಟೆ. ನಿನ್ನ ಎತ್ಕಂಡು ಮನೆಗೆ ಹೋಗೊದ್ರೊಳಗೆ ನನಗೆ ಸಾಕಾಗಿ ಹೋಯ್ತು. ಎಷ್ಟ ಬಡಕಂಡ್ರೂ ನಿನಗೆ ಎಚ್ಚರವಾಗ್ಲೇ ಇಲ್ಲ. ನಿಮ್ಮಮ್ಮ ಹೆದರಿಕೊಂಡು ರಾತ್ರಿನೇ ಆಸ್ಪತ್ರೆ ತಂದು ಹಾಕಿದ್ವಿ. ನಿನಗೆ ಮೋಹಿನಿ ತುಂಬಾ ಇಷ್ಟ ಆಗಿರೋದ್ರಿಂದ ಅವಳ ಬಗ್ಗೆ ನೀನು ತಿಳಿದುಕೊಂಡ ಈ ಕತೆಯಿಂದಲೇ ಹೀಗೆ ಹೆದರಿಕೊಂಡಿದ್ದೀಯಾ ...  ನಿನ್ನ ಮೋಹಿನಿಗೆ ಯಾವ ದೆವ್ವನೂ ಮೆಡ್ಕಂಡಿರಲಿಲ್ಲ ನೀನು ಸ್ವಲ್ಪ ಹೆದರೋದನ್ನ ಕಡಿಮೆ ಮಾಡ್ಕೋ.. ನೀನು ಪ್ರೀತಿಸಿದ ಹುಡುಗಿಗೆ ದೆವ್ವ ಹಿಡಿದಿದೆಯೆಂದು ಅತಿಯಾಗಿ ಯೋಚಿಸಿದ್ದರಿಂದ ಹೀಗಾಗಿದೆ ಅಷ್ಟೆ" 
ತಿಪ್ಪ ಇಷ್ಟು ಹೇಳಿ ನಿಲ್ಲಿಸಿದ.
ಅಷ್ಟರಲ್ಲಿ ನನ್ನ ತಲೆಯ ಹತ್ತಿರ ನಿಂತಿದ್ದ ಅಮ್ಮ ಗೊಣಗಲಾರಂಬಿಸಿದಳು.
"ಈ ತಿರ್ ಬೋಕಿ ನನ್ನ ಮಗನಿಗೆ ಹೇಳಿ ಹೇಳಿ ನನಗೂ ಸಾಕಾಯ್ತು. ಇವನು ನಾಲ್ಕೈದು ವರ್ಷ ಹುಡುಗ ಇದ್ದಾಗ ಏನೋ ಅಳ್ತಾವನಲ್ಲಾ ಅಂತ ತಟ್ಟೆಯಲ್ಲಿ ಸ್ವಲ್ಪ ಮಂಡಕ್ಕಿ ಹಾಕಿ ತಿನ್ಕೋ ಅಂತ ಕಟ್ಟೆ ಮೇಲೆ ಕೂರ್ಸಿದ್ದೆ. ಗಾಳಿ ಜೋರಾಗಿ ಬೀಸ್ತು ತಟ್ಟೇಲಿದ್ದ ಮಂಡಕ್ಕಿ ಗಾಳಿಗೆ ಹಾರೋಯ್ತಪ್ಪ ಅವತ್ತಿಂದ ಈ ನನ್ಮಗ ಮಂಡಕ್ಕಿ ನೋಡಿದ್ರೂ ಹೆದರ್ತಾನೆ. ಅವತ್ತಿಂದನೇ ಇವನ ಪುಕ್ಲು ಬುದ್ದಿ ಆರಂಭ ಆಯ್ತು ನೋಡು. ಮತ್ತೊಂದ್ ಸಾರಿ ಇವನು ಎಂಟನೇ ಕ್ಲಾಸ್ ಓದ್ತಾ ಇದ್ದ. ಪಕ್ಕದ ಮನೆ ದನ ಕಾಯೋ ಬಸ್ಯ ಕಕ್ಕಸ್ ರೂಮಲ್ಲಿ ಕೂತು ಕಳ್ಳತನದಿಂದ ಬೀಡಿ ಸೇದಿದ್ನಂತೆ. ಕಕ್ಕಸ್ ರೂಮಿಂದ ಹೋಗೆ ಬರ್ತಾ ಇದೆ. ಕೊಳ್ಳಿ ದೆವ್ವ ಅಂತ ಹೆದರ್ಕಂಡು ನಾಲಕ್ ದಿನ ಜ್ವರ ತನ್ಕಂಡು ಮಲಗಿದ್ದ. ಪಿಯುಸಿ ಓದ್ಬೇಕಾದ್ರೆ ಇವಂದ್ ಇನ್ನೊಂದ್ ರಾಮಾಯಣ... ಪಕ್ಕದ ಮನೆ ಪಂಕಜ ಮನೆ ಟೆರೇಸ್ ಮೇಲೆ ಸೀರೆ ಒಣಗಾಕೆ ಹಾಕಿದ್ಳಪ್ಪಾ. ಏನೋ ಗಾಳಿ ಜೋರಾಗಿ ಬೀಸಿದ್ದರಿಂದ ಸೀರೆ ಹಾರ್ಕೊಂಡು ಬಂದು ಕಟ್ಟೆ ಮ್ಯಾಲೆ ಕೂತಿದ್ದ ನನ್ನ ಮಗನ ತಲೆ ಮೇಲೆ ಬಿತ್ತು. ದೆವ್ವ ದೆವ್ವ ಅಂತ ಕೂಗ್ಕೊಂಡು ಇನ್ನೊಂದ್ ಸ್ವಲ್ಪ ಸೀರೆನಾ ತಲೆತುಂಬಾ ಸುತ್ಕೊಂಡು ಹೆದರುತ್ತಾ ನೆಲದ ಮೇಲೆ ಬಿದ್ದು ಹೊರಳಾಡಿ ಬಿಟ್ಟಿದ್ದ ಆಗ ಐದು ದಿನ ಜ್ವರ ಬಂದಿತ್ತು.. ಇವನ ಕಾಟ ನನಗೂ ಸಾಕಾಗಿದೆ...."
ಅಮ್ಮ ಇಷ್ಟು ಹೇಳಿ ನನ್ನ ಮುಸುಡಿಯನ್ನೊಮ್ಮೆ ತಿವಿದಳು.
ಅಷ್ಟರೊಳಗೆ ಶಂಕ್ರ ಒಳಗೆ ಬಂದ.
"ಏನ್ಲಾ ಶಂಕ್ರ..... ನೀನೆ ಏನ್ಲಾ, ಐದನೇ ಕ್ಲಾಸ್ ಓದೋವಾಗ ಮೋಹಿನಿಗೆ ದೆವ್ವ ಹಿಡಿದಿತ್ತು ಅಂತ ಹೇಳಿದ್ಲು.."
ಅಮ್ಮ ಶಂಕ್ರನಿಗೂ ತರಾಟೆ ತೆಗೆದು ಕೊಂಡ್ಳು...
"ಇಲ್ಲ ಕಣವ್ವಾ...  ಅವಳಿಗ್ಯಾಕೆ ದೆವ್ವ ಮೆಟ್ಕೊಳುತ್ತೆ..  ಹಂಗೆ ದೆವ್ವದ ಕಾಟ ಇದ್ದೆ ಇಂಜಿನಿಯರಿಂಗ್ ಓದೋಕಾಗ್ತದಾ...? ಅವರಪ್ಪ ವರ್ಷಕ್ಕೊಂದ್ ಸಾರಿ ಉಕ್ಕಡಗಾತ್ರಿ ಅಜ್ಜಯನಿಗೆ ಪೂಜೆ ಮಾಡಿಸ್ಕಂಡು ಬರ್ತಾರೆ.... ಮೋಹಿನಿ ಬಸ್ಟಾಂಡ್ ಅಲ್ಲಿ ಸಿಕ್ಕಾಗ ಪ್ರಕಾಶನಿಗೆ ಹೇಳು ನಾಲ್ಕು ದಿನ ಇರಲ್ಲ ಅಂತ ಹೇಳಿದ್ಳು. ನಾನು ತಮಾಷೆಗೆ ಮೋಹಿನಿಗೆ ದೆವ್ವ ಹಿಡ್ದೈತಿ ಉಕ್ಕಡಗಾತ್ರಿಗೆಹೋದ್ರು ಅಂತ ತಮಾಷೆ ಮಾಡ್ದೆ ಕಣವ್ವೋ ಅಷ್ಟೆ.."
ಶಂಕ್ರ ಅಮ್ಮನ ಮುಂದೆ ಹೆದರಿಕೆಯಿಂದಲೇ ಹೇಳಿ ಮುಗಿಸಿದ.
"ನಿನ್ ತಮಾಷೆ ಮನೆ ಹಾಳಾಗ.... ಇವ್ನು ಮಾಡ್ಕಂಡಿರೋದು ನೋಡು. ಹೆದರ್ಕಂಡು ಜ್ವರ ಬೇರೆ ತಂದ್ಕಂಡವ್ನೆ... ಇವ್ನ ಮುಸುಡಿಗೆ ಲವ್ವು ಬೇರೆ ಕೇಡು... ಅವಳೆಂಗೆ ಇವ್ನ ನೋಡಿ ಮೆಚ್ಕಂಡ್ಳೋ..."
ಅಮ್ಮ ಮತ್ತೆ ಮುಖಕ್ಕೆ ಮುಂಗಳಾರತಿ ಎತ್ತಲಾರಂಭಿಸಿದಳು..
ಅಷ್ಟರಲ್ಲಿ ಮೋಹಿನಿ ಬರುವುದು ಕಾಣಿಸಿತು.
"ಮೋಹಿನಿ ಬರ್ತವ್ಳೆ... ಸುಮ್ನಿರಮ್ಮ, ಹುಡಿಗೀರ ಮುಂದೆ ಮಾನ ಕಳೀ ಬೇಡ"
ಮೆಲು ದ್ವನಿಯಲ್ಲಿ ಅಮ್ಮನಿಗೆ ಹೇಳಿದೆ.
ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ರುದ್ರ,ಕುಮ್ಮಿ,  ಪದ್ಮಿ. ಮೋಹಿನಿ ಎಲ್ಲಾ ಒಳಗೆ ಬಂದರು. ಮೋಹಿನಿ ನನ್ನ ಪಕ್ಕದಲ್ಲಿ ಕುಳಿತು ನನ್ನ ತಲೆಯ ಮೇಲೆ ಕೈಯಿಟ್ಟು ಪರೀಕ್ಷಿಸಿದಳು. ಆಕೆಯ ಮೊದಲ ಸ್ಪರ್ಶದಿಂದ ನಾನು ರೋಮಾಂಚಿತನಾದೆ. ಒಂದೇ ಕ್ಷಣಕ್ಕೆ ಜ್ವರವೆಲ್ಲಾ ಮಾಯವಾಗಿ. ಮೈಯಲ್ಲೆಲ್ಲಾ ಪ್ರೀತಿಯ ಜ್ವರ ಆವರಿಸಿತ್ತು.
"ಇಂತಹ ಹೆದರು ಪುಕ್ಕಲ ಮದುವೆಯಾಗಿ ಅದೇನು ಸಂಸಾರ ಮಾಡ್ತಾನೋ, ಲವ್ವು ಅಂತೆ ಲವ್ವು...ಹೆದರ್ಕೊಂಡು ಎರೆಡೆರಡು ದಿನ ಜ್ವರ ತಂದ್ಕಂಡು ಮಲಗಿದ್ರೆ ಮುಗೀತು... ಸಂಸಾರ ನಡೆಸ್ದಂಗೆ"
ಎಲ್ಲರೂ ಹೋದ ಮೇಲೆ ಅಮ್ಮ ಮತ್ತೆ ಗೊಣಗಿದಳು .
ನನಗೂ ಕೇಳಿ ಸಾಕಾಗಿತ್ತು..
"ಏ... ಸುಮ್ನಿರವ್ವೋ.... ಮೋಹಿನಿ ನನ್ನ ಹಣೆ ಮುಟ್ಟಿದ್ ಕೂಡ್ಲೆ... ಜ್ವರ ಮಾಯ ಆಗ್ಲಿಲ್ವೇ... ಮುಂದೇನೂ ಹಂಗೆನೇ... ಅವಗೆಂತ ಜ್ವರನೂ ಬರಲ್ಲ ಬಿಡು" 
ಅಂದೆ.
ನನ್ನ ಮಾತು ಕೇಳಿ ಅಮ್ಮ ಸೀರೆಯ ಮುಸುಕಿನೊಳಗೆ ನಕ್ಕಿದ್ದು ಕಂಡಂತಾಯಿತು....
                                 - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment