Friday 5 February 2016

ಹೆಲ್ಮೆಟ್ ಪುರಾಣ

ಹೆಲ್ಮೆಟ್ ಪುರಾಣ


ಆ ದಿನ ನಾನು ನನ್ನ ಕುಟುಂಬದೊಡನೆ ನನ್ನ ಲಟ್ಕಾಸಿ ಬೈಕ್ ಹತ್ತಿ ಶಾಪಿಂಗ್ ಗೆ ಅಂತ ಮಂತ್ರಿ ಮಾಲ್ಗೆ ಹೊರಟೆ...ಯಾವುದೋ ಯುದ್ಧಕ್ಕೆ ಹೊರಟ ಸೈನಿಕರಂತೆ ನಾವಿಬ್ಬರು ಶಿರಸ್ತ್ರಾಣ ಧರಿಸಿ ಬೈಕ್ ಮೇಲೆ ಕೂತು ಸವಾರಿ ಹೊರಟೆವು. ಕತ್ತಿ, ಗುರಾಣಿ ಮಾತ್ರ ಇರಲಿಲ್ಲ ಅನ್ನಿ. ನನ್ನವಳು ನಿನ್ನೆ ದಿನ ಎರಡೆರಡು ಹೆಲ್ಮೆಟ್ ಖರೀದಿಸಿದ್ದಳು.ಹಳೆದು ಅಂತ ಎರಡ್ಮೂರು ಇದ್ದವು. ಏನ್ಮಾಡೊದು ಹೇಳಿ ನನ್ನವಳು ಯಾವ್ ವಸ್ತುನೂ ಒಂದೊಂದು ಕೊಂಡವಳೇ ಅಲ್ಲ...ನಾನು "ಯಾಕೆ ಇಷ್ಟೊಂದೆಲ್ಲಾ ...? ಏನ್ ಹೆಲ್ಮೆಟ್ ಅಂಗಡಿ ಇಡ್ತಿಯೇನು....?" ಎಂದೆ.
"ಸುಮ್ನಿರಿ ಸಾಕು.... ನೀವು ಗಂಡಸರು ಪುಟ್ಗೋಸಿ ಹಾಕ್ಕೊಂಡ್ರೂ ನಡೆಯುತ್ತೆ.. ಯಾರ್ ಕೇಳ್ತಾರೆ ನಿಮ್ಮನ್ನ.. ಹಂಗಸರಿಗೆ ಮ್ಯಾಚಿಂಗ್ ಅಂತ ಬ್ಯಾಡ್ವ... ? ನೋಡೋರು ಏನಂದ್ಕೊಳ್ತಾರೆ.." ಅಂದ್ಲು
ನಾನು ಸುಮ್ಮನಾಗಿ ಹೋದೆ...
ಇವತ್ತು ಹೆಲ್ಮೆಟ್ ಧರಿಸಿರುವ ಕಲರ್ ನದ್ದೇ ಸೀರೆ ಉಟ್ಟಿದ್ದಳು. ಎಂಥ ಮ್ಯಾಚಿಂಗ್ ಅಂತಿರಾ...!! ತ್ರೀ ಈಡಿಯಟಾ ಪಿಕ್ಚರ್ ನಲ್ಲಿ ಕರಿನಾ ಕಪೂರ್ ಹಾಕ್ಕೊಂಡು ಬರಲ್ವೇ..?? ಥೇಟ್ ಅದೇ ತರ ಕಾಣಿಸುತ್ತಿದ್ದಳು..

ಬೈಕಿಂದ ಹೊರಟು ಇನ್ನೇನು ಮಲ್ಲೇಶ್ವರಮ್ ಗೆ ತಲುಪುತ್ತಿದ್ದಂತೆ ನನ್ನವಳಿಗೆ ತಕ್ಷಣ ಜ್ಞಾನೋದಯವಾಯಿತು. ಬೋದಿ ವೃಕ್ಷದ ಕೆಳಗೆ ಬುದ್ದನಿಗೆ ಆಗಲಿಲ್ವೆ ಹಂಗೆ ಆಯಿತು ಅಂದ್ಕೊಳಿ.ಆದ್ರೆ ಇವಳಿಗಾದದ್ದು ಮಲ್ಲೇಶ್ವರಮ್ ತಿರುವಿನಲ್ಲಿ ಅಷ್ಟೆ. ಅದು ಏನಪ್ಪಾ ಅಂದ್ರೆ. ನಮ್ ಬೈಕಲ್ಲಿ ಕೂತ ನನ್ನ ಚಿಕ್ಕ ಮಗನಿಗೂ ಹೆಲ್ಮೆಟ್ ಕೊಡಿಸುವ ವಿಚಾರ. ನನ್ನ ಹತ್ತು ವರ್ಷದ ಮಗನಿಗೂ ಹೆಲ್ಮೆಟ್ ಕೊಂಡುಕೊಳ್ಳುವಂತೆ ಹಠ ಹಿಡಿದೇ ಬಿಟ್ಟಳು. ನಾನು ಬೇಡವೆಂದರೂ ಕೇಳಲಿಲ್ಲ.
"ಸರಕಾರದವರು ಪ್ರಜೆಗಳ ಪ್ರಾಣಕ್ಕೆ ಎಷ್ಟೊಂದು ಕೇರ್ ತಗೊಂಡು ಈ ರೂಲ್ಸ್ ಮಾಡಿದ್ದಾರೆ..ನಮಗೆ ನಮ್ಮ ಮಕ್ಕಳು ಕ್ಷೇಮವಿರುವುದು ಬೇಡವೇ.? ನನಗೆ ನನ್ನ ಮಗನ ಹಿತ ಮುಖ್ಯ. ನಾವಿಬ್ಬರು ಕ್ಷೇಮವಾಗಿದ್ದರೆ ಸಾಲದು ಮಗನಿಗೂ ಹೆಲ್ಮೆಟ್ ಕೊಡಿಸಿ"
ಎಂದಳು.
ಅವಳ ಸೆಂಟಿಮೆಂಟ್ ಡೈಲಾಗ್ ಗೆ ಕಣ್ಣೀರು ಹಾಕುವುದೊಂದೇ ಬಾಕಿ ಇತ್ತು. ಅಲ್ಲೇ ಅಂಗಡಿ ಯೊಂದರಲ್ಲಿ ಮಗನಿಗೆ ಕಾರ್ಟೂನ್ ಚಿತ್ರವಿರುವ ಹೆಲ್ಮೆಟ್ ಕೊಂಡೆನು.ನಾನು ನನ್ನ ಹಂಡತಿ ನನ್ನ ಮಗ ಮೂವರು ಹೆಲ್ಮೆಟ್ ಹಾಕ್ಕೊಂಡು ಮತ್ತೆ ನನ್ನ ಲಟ್ಕಾಸಿ ಬೈಕಲ್ಲಿ ಕೂತ್ಕೊಂಡು ಹೊರಟೆವು... ಏನ್ ಸೀನ್ ಅಂತಿರಾ...!! ದೇವಲೋಕದಿಂದ ದೇವತೆಗಳು ಕಿರೀಟ ಧಾರಿಗಳಾಗಿ ಬೈಕ್ ಸವಾರಿ ಮಾಡುತ್ತಿದ್ದಾರೋ ಎಂಬಂತೆ ಜನರೆಲ್ಲಾ ನಮ್ಮನ್ನೇ ನೋಡುತ್ತಿದ್ದರು. ಅದರಲ್ಲೊಬ್ಬ ದೂರದಿಂದಲೇ ತನ್ನ ಮೊಬೈಲ್ ನಿಂದ ಫೋಟೋ ತೆಗೆದುಕೊಂಡ. ಬಹುಷಃ ಫೇಸ್ ಬುಕ್ ಗೋ... ವಾಟ್ಸಪ್ ಗೋ ಹಾಕಲು ಇರಬೇಕು....!!!
"ಪಪ್ಪ ... ತಲೆಗೆ ಮಾತ್ರ ಹೆಲ್ಮೆಟ್ ಯಾಕೆ..? ಬಿದ್ರೆ ಮೈ ಕೈ ಗೆ ನೋವಾಗಲ್ವಾ...?"
ಮಗ ತನ್ನ ಮುಗ್ಧತೆಯಿಂದ ಪ್ರಶ್ನಿಸಿದ...
"ಹೌದು ಮಗು ನೋವಾಗುತ್ತೆ.... ಸರಕಾರದವರು ಹಂತ ಹಂತವಾಗಿ ಯೋಜನೆಗಳನ್ನು ಜಾರಿಗೆ ತರುತ್ತಾರೆ... ಮುಂದೆ ದೇಹಕ್ಕೆ ಕವಚವನ್ನೂ ಖಡ್ಡಾಯ ಮಾಡುತ್ತಾರೆ. ಮುಂದೆ ನಾವು ಸೂಪರ್ ಮ್ಯಾನ್ ಗಳಂತೆ ಸವಾರಿ ಮಾಡಬಹುದು" ಎಂದೆನು
"ಆ ಮಗು ಹತ್ರ ಏನ್ರಿ ತಮಾಷೆ"
ನನ್ನವಳು ಹಿಂದಿನಿಂದ ತಿವಿದು ಹೇಳಿದಳು.
ಮಂತ್ರಿ ಮಾಲ್ ರೀಚ್ ಆದ ಕೂಡಲೇ ಬೈಕನ್ನು ಪಾರ್ಕಿಂಗ್ನಲ್ಲಿ ಹಾಕಿದೆ... ದುರಾದೃಷ್ಟ ವಶಾತ್ ನನ್ನ ಬೈಕಲ್ಲಿಯ ಹೆಲ್ಮೆಟ್ ಲಾಕರ್ ನ್ನು ಮನೆಯಲ್ಲೇ ಬಿಟ್ಟು ಬಂದಿದ್ದೆ.. ಬೇರೆ ದಾರಿ ಇರಲಿಲ್ಲ ಮೂರು ಮೂರು ಹೆಲ್ಮೆಟ್ ಭಾರ ಹೊತ್ತು ನಡೆಯುವ ಜವಬ್ದಾರಿ ನನ್ನ ಪಾಲಿಗೆ ಬಂದಿತ್ತು. ನನ್ನವಳು ಮಗನೊಂದಿಗೆ ಮುಂದೆ ಮುಂದೆ ನಡೆದಳು ನಾನು ಕೂಲಿಯವನಂತೆ ಮೂರು ಹೆಲ್ಮೆಟ್ ಗಳನ್ನು ಹೊತ್ತು ಅವರನ್ನು ಹಿಂಬಾಲಿಸಿದೆ....
ಮಾಲ್ ನಲ್ಲಿರುವ ಲಗೇಜ್ ಕೌಂಟರ್ ನಲ್ಲಿ ನಮ್ಮ ಬ್ಯಾಗುಗಳನ್ನು ಇಟ್ಟೆವು.. ಆ ಪಾಪಿ ನಮ್ಮ ಹೆಲ್ಮಟ್ ಇಟ್ಟುಕೊಳ್ಳಲು ನಿರಾಕರಿಸಿದ...
ಶಾಪಿಂಗ್ ಮಾಡಲು ಟ್ರ್ಯಾಲಿಯನ್ನು ಎಳೆದುಕೊಂಡು ಹೆಲ್ಮೆಟ್ ಹಾಕಿಕೊಂಡೆ. ಟ್ರ್ಯಾಲಿ ಮೂರು ಹೆಲ್ಮೆಟ್ ನಿಂದ ತುಂಬಿ ಹೋಯಿತು ನನ್ನವಳು-."ಅಲ್ಲಿಂದ ತೆಗೆಯಿರಿ ನೋಡಿದವರು ಏನಂದುಕೊಂಡಾರು..?"
ಅಷ್ಟರಲ್ಲಿ ಕೂಲಿಯವನು
"ಸಾರ್..... ನಿಮ್ಮ ಹೆಲ್ಮೆಟ್ ಕೊಡಿ, ನಾನು ಹಿಡಿದು ಕೊಳ್ತೀನಿ, ಒಂದು ಗಂಟೆಗೆ ನೂರು ರೂಪಾಯಿ ಮಾತ್ರ" ಎಂದ
ನನ್ನವಳು ತಕ್ಷಣ ಹೆಲ್ಮೆಟ್ ಗಳನ್ನು ತೆಗೆದು ಕೂಲಿಯವನಿಗೆ ವಹಿಸಿದಳು. ನನ್ನವಳಿಗೆ ನಾನು ಹೆಲ್ಮಟ್ ಹಿಡಿದುಕೊಂಡು ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಕೂಲಿಯವನು ಹೆಲ್ಮೆಟ್ ಹಿಡಿದುಕೊಂಡು ನಮ್ಮ ಹಿಂದೆನೇ ಬರುತ್ತಿದ್ದ. ನೋಡಲು ಆಫ್ರಿಕನ್ ತರ ಕಪ್ಪಾಗಿದ್ದ.ಸ್ವಲ್ಪ ಸೈಡಿನಿಂದ ನೋಡಿದರೆ ಕಳ್ಳನ ತರ ಕಾಣುತ್ತಿದ್ದ. ಹೆಲ್ಮೆಟ್ ತೆಗೆದುಕೊಂಡು ಓಡಿ ಬಿಟ್ಟರೆ, ಅದೂ ಎರಡುವರೆ ಸಾವಿರ ಬೆಲೆ ಬಾಳುವ ಹೆಲ್ಮೆಟ್ಗಳು... ನಾನು ಅನುಮಾನಿಸಿದೆ. ನನ್ನ ಒಂದು ಕಣ್ಣು ಕೂಲಿಯವನ ಮೇಲೇ ಇತ್ತು.ಸ್ವತಂತ್ರವಾಗಿ ಶಾಪಿಂಗ್ ಮಾಡಲಾಗಲಿಲ್ಲ.
ಮಾಲ್ ನಲ್ಲಿ ಜನಜಂಗುಳಿ ದಟ್ಟವಾಗಿತ್ತು. ನನ್ನವಳಿಗೆ ಸೇವ್ ಪುರಿ ತಿನ್ನುವ ಬಯಕೆಯಾಯಿತು. ಕೊಡಿಸಿದೆ. ಆ ಆಫ್ರಿಕನ್ ನವನು ನನ್ನವಳು ತಿನ್ನುವುದನ್ನು ಗುರಾಯಿಸಿ ನೋಡುತ್ತಿದ್ದ. ನಾನು ಸ್ವಲ್ಪ ದೂರ ನಿಲ್ಲಲು ಹೇಳಿದೆ. ನಾವು ಸೇವ್ ಪುರಿ ತಿಂದು ಬರುವಷ್ಟರಲ್ಲಿ ಕೂಲಿಯವನು ಎರಡುವರೆ ಸಾವಿರ ರೂಪಾಯಿಯ ಹೆಲ್ಮೆಟ್ ತೆಗೆದುಕೊಂಡು ಪರಾರಿಯಾಗಿದ್ದ. ಸೇವ್ ಪುರಿಯ ಪರಿಣಾಮವಾಗಿ ಮೂರು ಹೆಲ್ಮೆಟ್ ಗಳು ಶೇವ್ ಆಗಿ ಹೋಗಿದ್ದವು. ಅವನಿಗೆ ಹಿಡಿ ಶಾಪ ಹಾಕಿಕೊಂಡೆ ಶಾಪಿಂಗ್ ಮುಗಿಸಿ ಹೊರಬಂದೆ. ಈಗ ನಾವು ಹೆಲ್ಮೆಟ್ ಇಲ್ಲದೇ ಪ್ರಯಾಣಮಾಡಬೇಕಿತ್ತು...
ನಾನು ನನ್ನ ಮೆದುಳನ್ನು ಜಾಗೃತ ಗೊಳಿಸಿಕೊಂಡು ಪೋಲೀಸರು ಇರದಂತಹ ವಾಮ ಮಾರ್ಗಗಳ ಬಗ್ಗೆ ಯೋಚಿಸಿಕೊಂಡೆ. ನನ್ನ ಲಟ್ಕಾಸಿ ಬೈಕ್ ನ ಸವಾರಿ ಸಂದಿ ಗೊಂದಿಯ ಕಡೆಗೆ ಹೊಕಟಿತು. ನಮ್ಮ ಪೋಲೀಸರು ಮಿಕಗಳನ್ನು ಹಿಡಿಯಲು ಸಿದ್ದಹಸ್ತರು. ಯಾವ ಕಡೆ ಗಾಳ ಹಾಕಿದರೆ ಯಾವ ಮೀನುಗಳನ್ನು ಹಿಡಿಯಬಹುದೆಂದು ಚನ್ನಾಗಿ ತಿಳಿದಿರುವವರು.ರಸ್ತೆಯ ತಿರುವಿನಲ್ಲಿ ಕಳ್ಳರಂತೆ ಮರೆಯಾಗಿ ನಿಂತಿದ್ದ ಪೋಲೀಸರು ನನ್ನ ಬೈಕ್ ಪ್ರವೇಶಿಸಿದ ಕೂಡಲೇ ಅವರ ಬಲೆಯಲ್ಲಿ ಕೆಡವಿಕೊಂಡೇ ಬಿಟ್ಟರು.ಅವರು ಹಿಡಿದ ರೀತಿ ನೋಡಿದರೆ ಸಿನಿಮಾದಲ್ಲಿ ಟೆರರಿಸ್ಟ್ ಗಳನ್ನು ಹಿಡಿದಂತಿತ್ತು. ನಾನು ಗಾಳಕ್ಕೆ ಸಿಕ್ಕ ಮೀನಿನಂತೆ ಚಡಪಡಿಸಿದೆ. ಹಿಂಬದಿ ಸವಾರರನ್ನು ಸೇರಿ ಸಾವಿರ ರೂಪಾಯಿ ದಂಡ ಹಾಕಲು ಮುಂದಾದರು. ನಾನು ನನ್ನ ಕತೆಯನ್ನು ವಿವರಿಸಿ ಹೇಳಿದರೂ ಕೇಳಲಿಲ್ಲ. ಕೊನೆಗೆ ನಾನೂರು ರೂಪಾಯಿಗಳಿಗೆ ಸುಲಭವಾಗಿಯೇ ಡೀಲ್ ಮುಗಿದು ಹೋಯಿತು.
ನನ್ನವಳು ಸಿಟ್ಟಿನಿಂದ
" ಅದಕ್ಕೆ ನಾನು ಯಾವಗಲೂ ಹೇಳೋದು ಕಾರ್ ತಗೋಳಿ ಅಂತ. ನನ್ ಮಾತು ಎಲ್ಲಿ ಕೇಳ್ತೀರಾ.."
ಎಂದು ಹೇಳಿದಳು
ಇದೇ ಮಾತನ್ನು ಆಕೆ ನನಗೆ ನೂರು ಸಾರಿ ಹೇಳಿದ್ದಳು.ಇವತ್ತಿನದು ನೂರ ಒಂದನೇ ಸಾರಿ ಇರಬಹುದೇನೋ...ಆದರೆ ಈ ಸಲದ ಅವಳ ಮಾತಿಗೆ ಕಾಲ ಮತ್ತು ಸನ್ನಿವೇಶಗಳೆರಡರ ಬೆಂಬಲ ಇತ್ತು. ನಾನು ಮಾತ್ರ ಏನೂ ಮಾತನಾಡದೇ ತೆಪ್ಪಗೆ ಬೈಕ್ ಓಡಿಸುತ್ತಿದ್ದೆ. ನನ್ನ ಗ್ರಹಚಾರವೋ ಏನೋ.. ನನ್ನ ಲಟ್ಕಾಸಿ ಬೈಕ್ ನ ಚೈನ್ ಲೂಸ್ ಆಗಿ ಇದೇ ಸಮಯಕ್ಕೆ "ಗರ್ ರ್... ರ್.... ರ್...." ಅಂತ ಸುದ್ದು ಬೇರೆ ಮಾಡಿತು....
                                  - ಪ್ರಕಾಶ್ ಎನ್ ಜಿಂಗಾಡೆ

No comments:

Post a Comment