Tuesday, 16 August 2016

ಬಸ್ಸು

ಬೆಳಗ್ಗೆ ಒಂಬತ್ತು ಆಗಿತ್ತು. ಬಸ್ ಸ್ಟ್ಯಾಂಡ್ ಕಡೆ ತಿರುಗಿ ಬರೋಣ ಬಾ ಎಂದು ಸತ್ಯ ನನ್ನನ್ನು ಬಲವಂತ ಮಾಡುತ್ತಿದ್ದ. ನಾನು ಬರಲ್ಲ ಎಂದರೂ ಸತ್ಯ ನನ್ನನ್ನು ಬಲವಂತವಾಗಿ ಬಸ್ಟ್ಯಾಂಡ್ ಗೆ ಕರೆದುಕೊಂಡು ಹೋದ. ಗಜಾನನ ಬಸ್ಸಿಗಾಗಿ ಸುಮಾರು ಹೊತ್ತು ಕಾದಿದ್ದಾಯಿತು. ಬಸ್ಸು ಸರಿಯಾದ ವೇಳೆಗೆ ಬರದಿದ್ದರಿಂದ ನನಗೆ ಒಳಗೊಳಗೆ ಸತ್ಯನ ಮೇಲೆ  ಕೋಪ ಬರಲಾರಂಬಿಸಿತು. ಏನೋ ಸಬೂಬು ಹೇಳಿ ಮನೆಯ ಕಡೆಗೆ ವಾಪಸ್ಸು ಹೋದರಾಯಿತು ಎಂದು ನಿರ್ಧರಿಸಿಕೊಂಡೆ. ಅಷ್ಟರಲ್ಲೇ ಆ ಡಕೋಟ ಬಸ್ಸು
"ಬುರ್ ರ್ ರ್ ರ್........." 
ಎಂದು ಸೌಂಡು ಮಾಡುತ್ತಾ ತನ್ನ ಜೊತೆ ಜೊತೆಗೆ ಧೂಳನ್ನೆಬ್ಬಿಸಿಕೊಂಡು ನಮ್ಮ ಕಡೆಗೆ ಬರುತ್ತಿತ್ತು.

"ನೋಡೋ ಸತ್ಯ....ಇವತ್ತೇ ಕೊನೆ, ಇನ್ಮೇಲೆ ನನ್ನನ್ನು ಬಸ್ ಸ್ಟಾಂಡ್ ಗೆ ವರೆಗೆ ಕರೆಯಬೇಡ, ಬೇಕಿದ್ದರೆ ನೀನೊಬ್ಬನೆ ಬಂದು ಹೋಗು... ನೀನುಂಟು ಅವಳುಂಟು. ನಿಮ್ಮಿಬ್ಬರ ಮದ್ಯೆ ನಾನ್ಯಾಕೋ... ಶಿವಪೂಜೆಯ ಮದ್ಯೆ ಕರಡಿಯಂತೆ"

ಸುಮಾರು ಹೊತ್ತು ಬಸ್ಸಿಗಾಗಿ ಕಾದ ಸಿಟ್ಟು ನನ್ನನ್ನು ಹಾಗೆ ಹೇಳಿಸಿತು.

"ಸರಿ ಸರಿ ಬಿಡು....!!!  ಬಸ್ ಬಂದಾಯ್ತು ಕ್ಯಾತೆ ತಗೆಯಬೇಡ. ಸ್ವಲ್ಪ ಹೊತ್ತು ಸುಮ್ನಿರು"
ಅಂದ

ಆಗಲೇ ಸತ್ಯನ ದೃಷ್ಠಿ ಬಸ್ಸಿನ ವಿಂಡೋ ಸೀಟ್ ನಲ್ಲಿ ಕುಳಿತಿದ್ದ ಮಾನಸ ಕಡೆಗೆ ನೆಟ್ಟಿತ್ತು. ..... ಅವಳೂ ಸಹ ಕಿಟಕಿಯ ಪಕ್ಕದಲ್ಲಿ ಕುಳಿತುಕೊಂಡು ಸತ್ಯನ ಇರುವಿಕೆಯನ್ನೇ ನಿರೀಕ್ಷಿಸಿದ್ದಳು. ಬಸ್ಸು ಬಂದು ನಿಂತ ಕೂಡಲೇ ಸತ್ಯ ಅವಳನ್ನೇ ಎವೆ ಇಕ್ಕಿ ನೋಡತೊಡಗಿದ. ಅವಳು ಸತ್ಯನ ಕಡೆಗೊಮ್ಮೆ ನೋಡಿ ಮಿಂಚಿನಂತಹ ಸ್ಮೈಲ್ ಕೊಟ್ಟಳು. ನನಗೆನೋ ಅವಳು ಕೊಟ್ಟ ಆ ಸ್ಮೈಲು ಸತ್ಯನ ಹೃದಯಕ್ಕೇ ಸಿಡಿಲು ಬಡಿದ ತರಹನೇ ಕಂಡಿತು. ಸತ್ಯ ಆ ಸ್ಮೈಲಿಗೆ ಕ್ಲೀನ್ ಬೋಲ್ಡ ಆಗಿ ಹೋದ. ಕರೆಂಟ್ ಹೊಡೆದ ಕಾಗೆ ತರಹ ನಿಂತ. ಸತ್ಯ ತನ್ನ ಹೃದಯವನ್ನು ಹಿಡಿದು ಕೊಂಡು ಅವಳ ಜೊತೆ ಮಾತನಾಡಲು ಬಸ್ಸ್ ಹತ್ತಿಯೇ ಬಿಟ್ಟ. ನಾನು ಒಂಟಿಯಾಗಿ ನಿಂತು ಅವರಿಬ್ಬರಿರು ಹತ್ತಿರುವ ಬಸ್ಸು ಕಣ್ಣಿಂದ ದೂರವಾಗುವವರೆಗೂ ನೋಡುತ್ತಾ ನಿಂತೆ.  ಬಸ್ಸು ಮತ್ತೆ ಧೂಳನ್ನೆಬ್ಬಿಸುತ್ತಾ ಮುಂದೆ ಸಾಗುತ್ತಿತ್ತು.

ಮಾನಸ ಮುದ್ದಾದ ಹುಡುಗಿ. ಹಳ್ಳಿ ಹುಡುಗಿಯಾದರೂ ರೂಪದಲ್ಲಿ ಯಾವ ಅಪ್ಸರೆಗಿಂತಲೂ ಕಡಿಮೆಯಿರಲಿಲ್ಲ. ಅಂದು ಮುಂಜಾನೆಯ ಹೊಂಬಣ್ಣದಲ್ಲಿ ಅವಳ ಮುಖ ತಾಜಾತನದಿಂದ ಕಂಗೊಳಿಸುತ್ತಿತ್ತು. ಕಣ್ಣಂಚಿನಲ್ಲಿ ತೀಡಿದ್ದ ಕಾಡಿಗೆಯಿಂದ ಅವಳ ಕಣ್ಣು ಮೀನಿನಂತೆ ಕಾಣುತ್ತಿತ್ತು. ತಲೆಯ ಮೇಲಿಂದ ಇಳಿಬಿದ್ದ ಮುಂಗುರುಳುಗಳು ಆಕೆಯ ಮುದ್ದಾದ ಕೆನ್ನೆಯನ್ನು ಸ್ಪರ್ಶಿಸುತ್ತಿದ್ದವು. ಮಾನಸಳ ಆ ಸೌಂದರ್ಯ ನೈಜತೆಯಿಂದಲೂ, ಪ್ರಕೃತಿಯ ಸಹಜತೆಯಿಂದಲೂ ಕೂಡಿತ್ತು.ಅವಳ ಸುಂದರ ಸರಳ ಸೌಂದರ್ಯಕ್ಕೆ ಸತ್ಯ ಪ್ರೇಮ ಪೂಜಾರಿಯಾಗಿ ಬಿಟ್ಟಿದ್ದ.

ಮಾನಸ ಕಾಲೇಜ್ ಓದುತ್ತಿದ್ದ ಹುಡುಗಿ. ತನ್ನೂರಲ್ಲಿ ಕಾಲೇಜ್ ಇಲ್ಲವಾದ್ದರಿಂದ ದಿನಾ ಗಜಾನನ ಬಸ್ಸಿನಲ್ಲಿ ತನ್ನೂರಾದ ಗೊರವನಹಳ್ಳಿಯಿಂದ ಹೊನ್ನವಳ್ಳಿಗೆ ಓದಲು ಹೋಗುತ್ತಿದ್ದಳು. ಅದರ ಮಧ್ಯದಲ್ಲಿರುವುದೇ ನಮ್ಮೂರು ಬಸಾಪುರ. ನಮ್ಮ ಸತ್ಯ ಒಂದು ದಿನ ಹೊನ್ನವಳ್ಳಿಗೆ ಹೋಗುವಾಗ ಈ ಮಾನಸಳನ್ನು ನೋಡಿದ್ದನಂತೆ. ಅವಳ ಸುಂದರ ರೂಪ ಕಂಡು ಬಸ್ಸಲ್ಲೇ ಗರ ಬಡಿದವನಂತೆ ನಿಂತು ಕೊಂಡನಂತೆ. ಅಲ್ಲೇ ಪ್ರೇಮ ಲೋಕದ ಕನಸು ಕಾಣುತ್ತಾ ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿದ್ದನಂತೆ. ಅಂದಿನಿಂದ ಸತ್ಯ ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಬಸ್ ಸ್ಟಾಂಡ್ ಗೆ ಹೋಗೋದು. ಬಸ್ ಹತ್ತುವುದು ಮನಸ್ಸು ತೃಪ್ತಿಯಾಗುವವರೆಗೂ ಮಾನಸ ಜೊತೆ ಮಾತನಾಡುವುದು. ಮತ್ತೆ ಮುಂದಿನ ಸ್ಟಾಪಲ್ಲಿ ಇಳಿಯುವುದು. ಹೀಗೆ ದಿನಾಲೂ ಅಭ್ಯಾಸ ಮಾಡಿಕೊಂಡಿದ್ದ. ಒಂದೊಂದು ಸಲ ಮಾತು ಮುಗಿಯದೇ ಇದ್ದಾಗ ಅಥವಾ ಮಾನಸ ಸುಂದರವಾಗಿ ಕಂಡಾಗ ಸತ್ಯ ಹೊನ್ನವಳ್ಳಿಯ ವರೆಗೂ ಪ್ರಯಾಣ ಮಾಡಿದ ಎಷ್ಟೋ ಉದಾಹರಣೆಗಳಿವೆ. ಮನೆಯಲ್ಲಿ ಅವರಮ್ಮ ಮಗ ಎಲ್ಲಿ ಹೋಗಿದ್ದಾನೆ ಟಿಫನ್ ಮಾಡಲು ಬರಲಿಲ್ಲ ಎಂದು ಕಾಯುತ್ತಿದ್ದರೆ ಸತ್ಯ ಮಾತ್ರ ಮಾನಸಗಾಗಿ ಬಸ್ ಸ್ಟಾಂಡ್ ಕಾಯುತ್ತಿದ್ದ. ಮಾನಸಳ ಸುಂದರ ರೂಪ ನೋಡುವ ಸಲುವಾಗಿಯೇ ಎಷ್ಟೋ ಸಲ ಬೆಳಗಿನ ಉಪಹಾರ ವಿಲ್ಲದೆ ಉಪವಾಸ ಅನುಭವಿಸಿದ್ದೂ ಇದೆ.

ನನಗೇನು ಸತ್ಯನ ಲವ್ ಸ್ಟೋರಿಯಲ್ಲಿ ವಿಶೇಷತೆ ಕಾಣುತ್ತಿರಲಿಲ್ಲ. ಅವನು ಹುಡುಗಿಯರಿಗೆ ಕಾಳು ಹಾಕುವುದರಲ್ಲಿ ನಿಸ್ಸೀಮ. ಅವನ ಮನೆಯ ಹತ್ತಿರದಲ್ಲೆ ಹೈಸ್ಕೂಲ್ ಇತ್ತು.  ಈ ಹೈಸ್ಕೂಲ್ ಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯಿಂದ ಹುಡುಗರು ಹುಡುಗಿಯರು ಓದಲು ಬರುತ್ತಿದ್ದರು. ಮಾನಸ ಸಿಗುವುದಕ್ಕಿಂತ ಮೊದಲು ಹೈಸ್ಕೂಲ್ ನಲ್ಲಿದ್ದ ಸುಂದರ ಹುಡುಗಿಯರನ್ನು ಪಟಾಯಿಸುವುದೇ ಇವನ ಕೆಲಸವಾಗಿತ್ತು. ತನ್ನ ಚಿಕ್ಕಪ್ಪನ ಬುಕ್ ಸ್ಟಾಲ್ ಅಂಗಡಿಯಲ್ಲಿ ಕುಳಿತುಕೊಂಡು ಹುಡುಗಿಯರನ್ನು ಪಟಾಯಿಸಲು ಬಣ್ಣ ಬಣ್ಣದ ಮಾತುಗಳನ್ನಾಡುತ್ತಿದ್ದ. ಅಬ್ಬಾ....!!! ಈ ಹುಡುಗಿಯರೋ......!!! ಅವರೇನು ಕಡಿಮೆಯಿರಲಿಲ್ಲ ಕೆಲವರು ಅವನ ಬಣ್ಣದ ಮಾತಿಗೆ ಮರುಳಾಗಿ ಹೋಗಿದ್ದರು. ನನಗೆ ಗೊತ್ತಿರುವಂತೆ ಅವನು ಹಾಕಿದ ಕಾಳಿಗೆ ನಾಲ್ಕೈದು ಹುಡುಗಿಯರು ಬಲೆಗೆ ಬಿದ್ದಿದ್ದು ಉಂಟು. ಅವರಲ್ಲಿ ನಮ್ಮನೆ ಹತ್ತಿರದ ಹುಡುಗಿ ಶಬಾನಾ ಒಬ್ಬಳು. ಅವಳು ಪ್ರೇಮಿಗಳದಿನದಂದು ಸತ್ಯನಿಗೆ "ಐ ಲವ್ ಯೂ"  ಅಂತ ಬರೆದು ಗ್ರಿಟಿಂಗ್ಸ ಕಾರ್ಡು ಕೊಟ್ಟಿದ್ಲು. ಕೆಇಬಿ ಆಫೀಸ್ ನಲ್ಲಿ ಕ್ಲರ್ಕ್ ಆಗಿದ್ದ ತುಳಜಾ ನಾಯ್ಕನ ಮಗಳು ಲಲಿತ ಸಹ ಅತಿ ಉದ್ದವಾದ ಪ್ರೇಮ ಪತ್ರವನ್ನು ಕಳುಹಿಸಿದ್ದಳು. ಕೋಟೆ ಮಲ್ಲೂರಿನ ಹುಡುಗಿ ಲಕ್ಷ್ಮೀ ಶಾಲೆಯ ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ರಬ್ಬರ್ ಕೊಳ್ಳುವ ನೆಪದಲ್ಲಿ ಸತ್ಯನನ್ನು ನೋಡಲು ಆಗಾಗ ಬುಕ್ ಸ್ಟಾಲ್ ನಲ್ಲಿ ಹಾಜರಾಗುತ್ತಿದ್ದಳು. ಕಣಿವೆ ಹಳ್ಳದಿಂದ ಬರುತ್ತಿದ್ದ ಹುಡುಗಿ ಶೋಭ ಸತ್ಯನನ್ನು ನೋಡಲೆಂದೇ ಹೈಸ್ಕೂಲ್ ಗೆ ಬರುತ್ತಿದ್ದೇನೆ ಎಂಬಂತೆ ವರ್ತಿಸುತ್ತಿದ್ದಳು. ಇನ್ನು ಎಷ್ಟು ಹುಡುಗಿಯರು ಸತ್ಯನ ಬಣ್ಣದ ಮಾತಿಗೆ ಮರುಳಾಗಿದ್ದರೋ ನನಗೆ ಅಷ್ಟಾಗಿ ತಿಳಿಯದು...

"ಲೋ... ಸತ್ಯ ಯಾಕೋ ಈ ಹುಡುಗಿಯರ ತಲೆ ಕೆಡಿಸ್ತಿಯಾ...?  ಲವ್ವು ಗಿವ್ವು ಅಂತ ಸಿರಿಯಸ್ಸಾಗಿ ತಗೊಂಡ್ರೆ ಏನೋ ಮಾಡ್ತಿಯಾ..? ಪಾಪ ಓದಲು ಬಂದ ಹುಡುಗಿಯರನ್ನ ಈ ತರ ಸತಾಯಿಸಬಾರದು.."

ಅಂತ ಒಂದು ಸಲ ಬುದ್ದಿವಾದ ಹೇಳಿದೆ.
ನನ್ನ ಎದುರಿಗೆ "ಹ್ಞೂಂ.... ಸತಾಯಿಸಲ್ಲ ಬಿಡು" ಎಂದು ಹೇಳುತ್ತಿದ್ದನೇ ಹೊರತು ಹುಡುಗಿಯರನ್ನು ಚುಡಾಯಿಸುವುದು, ಅವರನ್ನು ಪಟಾಯಿಸುವುದು ಮಾತ್ರ ಬಿಟ್ಟಿರಲಿಲ್ಲ. ದಿನ ಬೆಳಗ್ಗೆ ಹೈಸ್ಕೂಲ್ ಗೆ ಬರುವ ಹುಡುಗಿಯರ ದಾರಿಯನ್ನೇ ಕಾಯುತ್ತಾ ನಿಂತಿರುತ್ತಿದ್ದ..

ಸತ್ಯನ ಕಾಲೇಜು ವ್ಯಾಸಂಗ ನಮ್ಮೂರಲ್ಲಿ ಮುಗಿದಾಗ ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ಹೋಗಬೇಕಾಗಿ ಬಂತು. ಸರ್ಕಾರಿ ಖೋಟದ ಡಿಪ್ಲಮೋ ಸೀಟು ಮೈಸೂರಿನಲ್ಲಿ ಸಿಕ್ಕಿತ್ತು. ಸತ್ಯನ ಜೊತೆ ಮೈಸೂರಿಗೆ ಹೋಗಲು ಅವರ ಚಿಕ್ಕಪ್ಪ ನನ್ನನ್ನೂ ಕಳುಹಿಸಿದರು. ನಾನು ಸತ್ಯನ ಜೊತೆ ಮೈಸೂರಿಗೆ ಹೋಗಿ ಕಾಲೇಜಿನಲ್ಲಿ  ಅಡ್ಮಿಷನ್ ಮಾಡಿಸಿದೆ. ಉಳಿದುಕೊಳ್ಳಲು ನಮ್ಮೂರಿನ ಕಡೆಯವರೇ ಆದ ಮೂರ್ನಾಲ್ಕು ಹುಡುಗರನ್ನು ಕೌನ್ಸಿಲಿಂಗ್ ನಲ್ಲೇ ಗುರುತಿಸಿ, ಒಟ್ಟಾಗಿ ಸೇರಿಸಿ ಹಾಲ್ ಅಡಿಗೆ ಕೋಣೆ ಇರುವಂತಹ ಚಿಕ್ಕ ಮನೆಯ ವ್ಯವಸ್ಥೆಯನ್ನೂ ಮಾಡಿದ್ದಾಯಿತು. ಹುಡುಗರೆಲ್ಲರೂ ಒಟ್ಟಿಗೆ ಸೇರಿ ಕಷ್ಟ ಪಟ್ಟು ಓದಲಾರಂಬಿಸಿದರು. ಹುಡುಗಿಯರನ್ನು ಪಟಾಯಿಸಲು ಐಲು ಬೈಲಾಗಿ ವರ್ತಿಸುತ್ತಿದ್ದ ನಮ್ಮ ಸತ್ಯನಿಗೆ ಇನ್ನಾದರೂ ಹುಡುಗತನದ ಬುದ್ಧಿ ಹೊರಟು ಹೋಗಿ ಜವಬ್ದಾರಿಯಿಂದ ವರ್ತಿಸುತ್ತಾನೆ ಅಂತ ನಾನು ಊಹಿಸಿದ್ದೆ. ಆದರೆ ನನ್ನ ಊಹೆ ತಪ್ಪಾಗಿ ಹೋಯಿತು. ಊರಲ್ಲಿ ಹುಡುಗಿಯರಿಗೆ ಕಾಳು ಹಾಕಿ ಹಾಕಿ ಪಟಾಯಿಸುವ ಅಭ್ಯಾಸ ಮಾಡಿಕೊಂಡಿದ್ದ ಸತ್ಯ ಅದನ್ನು ಮೈಸೂರಿನಲ್ಲಿಯೂ ಮುಂದುವರೆಸಿದ.
ಸತ್ಯನ ಮೈಸೂರಿ ಪ್ರೇಮ ಪುರಾಣ ನನಗೆ ಗೊತ್ತಾಗಿದ್ದು ಆತ ಓದು ಮುಗಿಸಿ ನಮ್ಮೂರಿಗೆ ವಾಪಸ್ಸು ಬಂದಾಗಲೇ. ಅಲ್ಲಿಯ ವರೆಗೂ ಸತ್ಯ ಮೈಸೂರಿನಲ್ಲಿ ಚನ್ನಾಗಿ ಓದುತ್ತಿದ್ದಾನೆ. ಎಂದೇ ನಾನು ತಿಳಿದು ಕೊಂಡಿದ್ದೆ. ಅವನು ಓದು ಪೂರೈಸಿ ಬಂದ ಕೂಡಲೇ ಅವನಿಗೆ ನೌಕರಿ ಹುಡುಕಿ ಓದಿರುವ ಕನ್ಯೆಯನ್ನೇ ನೋಡಿ ಮದುವೆ ಮಾಡಿದರಾಯಿತು ಎಂದು ಅವನ ಚಿಕ್ಕಪ್ಪ ಯೋಚಿಸುತ್ತಿದ್ದರೆ. ಸತ್ಯ ಊರಿಗೆ ಬಂದು ಮೂರ್ನಾಲ್ಕು ತಿಂಗಳು ಕಳೆದರೂ ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದ. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಗೆಳೆಯರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಗರ ಬಡಿದವನಂತೆ ಏನೋ ಯೋಚನೆ ಮಾಡಿಕೊಂಡೇ ಕುಳಿತಿರುತ್ತಿದ್ದ. ಇದನ್ನೆಲ್ಲಾ ಗಮನಿಸಿದ ಅವನ ಚಿಕ್ಕಪ್ಪ ಒಂದು ದಿನ ನಮ್ಮ ಮನೆಗೆ ಬಂದರು.

"ಸತ್ಯ ಮೈಸೂರಿನಿಂದ ವಾಪಾಸ್ಸಾದಾಗಿನಿಂದ ಸರಿಯಾಗಿ ವರ್ತಿಸುತ್ತಿಲ್ಲ. ಸರಿಯಾಗಿ ಊಟಾನೂ ಮಾಡುತ್ತಿಲ್ಲ. ಬಹುಷಃ ಮೈಸೂರಿನಲ್ಲಿ ಏನೋ ಘಟನೆ ನಡೆದಿರಬೇಕು. ಏನಂತ ಸ್ವಲ್ಪ ತಿಳ್ಕೊ ಅವನಿಗೆ ಸರಿಯಾಗಿ ಬುದ್ಧಿವಾದ ಹೇಳು. ಎಷ್ಟೇ ಆದರೂ ತಂದೆ ಇಲ್ಲದ ಹುಡುಗ"

ಅವನ ಚಿಕ್ಕಪ್ಪ ಸ್ವಲ್ಪ ಆತಂಕದಿಂದಲೇ ಹೇಳಿದರು.
ಹಿರಿಯರಾಗಿ ಅವರು ನನಗೆ ಕೊಟ್ಟ ಜವಾಬ್ದಾರಿಯನ್ನು ನಾನು ನಿರ್ವಹಿಸಲೇ ಬೇಕಿತ್ತು. ಒಂದು ದಿನ ಹೊರಗೆ ಕರೆದುಕೊಂಡು ಆತ್ಮೀಯವಾಗಿ ಮಾತನಾಡಿಸಿ ಅವನ ಮನಸ್ಸಿನಲ್ಲಿರುವ ವಿಚಾರವನ್ನು ಹೊರಗೆ ತಗೆದೆ. ಆಗ ಅವನು ಹೇಳಿದ್ದು "ಸಮ್ರೀನ್ ತಾಜ್' ಎನ್ನು ಸುಂದರ ಹುಡುಗಿಯ ಕತೆಯನ್ನ......

ಸಮ್ರೀನ್ ತಾಜ್ ಮೈಸೂರಿನಲ್ಲಿದ್ದಾಗ ಸಿಕ್ಕ ಹುಡುಗಿ. ಸುಕೋಮಲವಾದ ಸುಂದರವಾದ ಕನ್ಯೆ. ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದಳು. ಸತ್ಯನ ಮನೆಯ ಪಕ್ಕದಲ್ಲೇ ಇದ್ದವಳು. ಬಟ್ಟೆ ಒಣಗಿಸಲೆಂದು ಟೆರೇಸ್ ಮೇಲೆ ಬಂದಾಗಲೇ ಸತ್ಯ ಆ ಸುಂದರ ಹುಡುಗಿಯನ್ನು  ಮೊದಲು ನೋಡಿದ್ದು. ಹಳ್ಳಿ ಹುಡುಗಿಯರನ್ನು ನೋಡಿ ಬೆಳೆದ ಸತ್ಯನಿಗೆ ಮೈಸೂರು ಹುಡುಗಿಯ ನಯ ನಾಜೂಕುತನ ಸುಂದರ ರೂಪ ಬಹುವಾಗಿ ಆಕರ್ಷಿಸಿತ್ತು. ಅವಳ ಜಿಂಕೆಯಂತಹ ನಡೆ, ಕೋಗಿಲೆಯಂತಹ ಸುಮಧುರ ಸ್ವರ, ಮಿಂಚಿನಂತೆ ಹೊಳೆಯುತ್ತಿದ್ದ ಆಕೆಯ ಬಟ್ಟಲು ಕಣ್ಣುಗಳು. ಬಳ್ಳಿಯಂತೆ ಬಳುಕುವ ಅವಳ ನಡು. ಅವಳು ಹೆಜ್ಜೆ ಹಾಕಿ ನಡೆಯುತ್ತಿದ್ದರೆ ಅದರ ಗೆಜ್ಜೆಯ ಸದ್ದು ಹೃದಯದೊಳಗೆ ಮಾರ್ಧನಿಸುತ್ತಿದೆಯೇನೋ ಎಂಬಂತಹ ಅಂತರ್ನಾದ. ಇವೆಲ್ಲಾ ರೂಪ ಹೊಂದಿದ್ದ ಸಮ್ರೀನ್ ರೂಪದಲ್ಲಿ ಶ್ರಿಮಂತಿಕೆಯಿಂದ ಕಂಗೊಳಿಸುತ್ತಿದ್ದಳು. ಸಮ್ರೀನ್ ಎದುರಿಗೆ ಬಂದಾಗಲೆಲ್ಲಾ ಸತ್ಯನ ಹೃದಯದಲ್ಲಿ ಅದೆಂತದೋ ಒಲವಗೀತೆ ಹಾಡಿದಂತಾಗುತ್ತಿತ್ತು. ಪದೇ ಪದೇ ತನ್ನ ಹೃದಯದಲ್ಲಿ ಕಚಗುಳಿಯಿಡುತ್ತಿದ್ದ ಆ ನವಿರು ಭಾವನೆ ಸತ್ಯನ ಮನಸಿನಲ್ಲಿ ಬೆಳೆಯುತ್ತಾ ಹೋಯಿತು.....
ಸಮ್ರೀನ್ ಕಾಲೇಜ್ ಗೆ ಹೋಗುವ ಸಮಯ ಮತ್ತು ಸತ್ಯನ ಸಮಯ ಒಂದೇಯಾದ್ದರಿಂದ ಆಗಾಗ ದಾರಿಯಲ್ಲಿಯೂ ಸಿಗುತ್ತಿದ್ದಳು. ಮೊದ ಮೊದಲು ಕಣ್ಣುಗಳಲ್ಲೇ ಮಾತು. ಸನ್ನೆಗಳು. ಆಗಾಗ ಟೆರೆಸ್ ಮೇಲೆ ಮೌನ ಮಾತುಗಳು, ಮನಸುಗಳು ಏನೆನೋ ಮಾತನಾಡಿದಂತೆ ಇಬ್ಬರಿಗೂ ಹಿತ ಅನುಭವವನ್ನು ನೀಡಿದ್ದವು. ಸತ್ಯ ಹೇಗೋ ಅವಳ ತಮ್ಮನ ಗೆಳೆತನ ಮಾಡಿ ಸಮ್ರೀನ್ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲಾರಂಭಿಸಿದ. ಸಮ್ರೀನ್ ಗೂ ಸಹ ಅವಳ ತಮ್ಮನೇ ಮದ್ಯವರ್ತಿಯಾಗಿದ್ದ. ಹೇಗೋ ಇಬ್ಬರ ಪ್ರೇಮ ಸುಭದ್ರವಾಯಿತು. ಅವರ ಪ್ರೇಮ ಸುಭದ್ರವಾಗಲು ಹೆಚ್ಚಿನ ಸಮಯ ತೆಗೆದು ಕೊಂಡಿದ್ದರಿಂದಲೋ ಏನೋ ಆಗಲೇ ಸತ್ಯನ ಓದು ಅಂತಿಮ ಹಂತಕ್ಕೆ ಬಂದಿತ್ತು. ಇನ್ನೇನಿದ್ದರೂ ಸತ್ಯನ ಓದು ಮೈಸೂರಿನಲ್ಲಿ ಬರಿಯ ಒಂದು ತಿಂಗಳು ಮಾತ್ರ ಬಾಕಿ ಉಳಿದಿತ್ತು. ಪರೀಕ್ಷೆಯೆಲ್ಲಾ ಮುಗಿದ ಮೇಲೆ ಗಂಟು ಮೂಟೆ ಕಟ್ಟಿಕೊಂಡು ಬಸಾಪುರಕ್ಕೆ ವಾಪಸ್ಸಾಗಬೇಕಿತ್ತು. ವಾಪಸ್ಸು ಹೋಗುವುದಾದರೂ ಹೇಗೆ.....?  ಸಮ್ರೀನ್ ಪ್ರೀತಿಯನ್ನು ಬಿಟ್ಟು ಬರಬೇಕೇ....? ಅವಳು ಜೊತೆಗೆ ಬರಲು ಒಪ್ಪಿಗೆ ಸೂಚಿಸಿದಳಾದರೂ ಇನ್ನೂ ಹದಿನೆಂಟರ ಹೊಸ್ತಿಲಲ್ಲಿರುವ ಅಪ್ರಾಪ್ತೆ. ಕೋಮು ಗಲಬೆಗಳು ನಡೆಯುತ್ತಿದ್ದ ಆ ಸಂದರ್ಭದಲ್ಲಿ ಸಮ್ರೀನ್ ಳನ್ನು ಊರಿಗೆ ತರುವುದಾದರೂ ಹೇಗೆ...?  ಮನೆಯಲ್ಲಿ ಸಮ್ರೀನ್ ಳನ್ನು ಒಪ್ಪುವರೇ...? ಇನ್ನೂ ಸ್ವಂತ ಕಾಲಲ್ಲಿ ನಿಲ್ಲದೇ, ಕೆಲಸವೇ ಇಲ್ಲದಿರುವಾಗ ಪ್ರೀತಿಯನ್ನು ಹೇಗೆ ಮುನ್ನಡೆಸಬೇಕು...? ಇಷ್ಟೆಲ್ಲಾ ಸಮಸ್ಯೆಯನ್ನು ಹೊತ್ತು ಕೊಂಡು ಊರಿಗೆ ವಾಪಾಸ್ಸಾದ ಸತ್ಯ ಹೇಗಿರಲು ಸಾಧ್ಯ ಹೇಳಿ.... ? ಅವಳದೇ ಯೋಚನೆ... ಮನಸಿನಲ್ಲಿ ಅವಳೇ ತುಂಬಿರುವಾಗ ವಾಸ್ತವದಲ್ಲಿ ನಡೆಯುವ ಪ್ರಾಪಂಚಿಕ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಾದರೂ ಹೇಗೆ...?  ದೇಹವೆಲ್ಲೋ.... ಮನಸ್ಸು ಎಲ್ಲೋ.... ಸರಿಯಾಗಿ ಮಾತಿಲ್ಲ.... ಹೊಟ್ಟೆಗೆ ಊಟವಿಲ್ಲ.... ಮನಸು ಏನೋ ಕಳೆದುಕೊಂಡಿದೆ ಎನ್ನುವಂತಹ ನಶ್ವರ ಭಾವ. ಊರಿಗೆ ವಾಪಸ್ಸು ಬಂದಿದ್ದು ಸತ್ಯನ ದೇಹವೇ ಹೊರತು ಮನಸ್ಸಲ್ಲ.

ಮೈಸೂರಿನಲ್ಲೇ ಇದ್ದ ಅವನ ಮನಸ್ಸನ್ನು  ಅವನಿಗೂ ತಿಳಿಯದಂತೆ ನಿಧಾನವಾಗಿ ವಾಪಸ್ಸು ತರಲಾರಂಭಿಸಿದೆ. ನೌಕರಿ ಹುಡುಕುವಂತೆ ಹೇಳುತ್ತಿದ್ದೆ. ಹಿರಿಯ ಮಗನಾಗಿ ತನ್ನ ಜವಬ್ದಾರಿಯನ್ನು ಸ್ವಲ್ಪ ಸ್ವಲ್ಪವೇ ಗಮನಕ್ಕೆ ತಂದೆ. ಮನೆಯ ಪರಿಸ್ಥಿತಿ ತಾನು ಮಾಡಬೇಕಾದ ಕೆಲಸಗಳು ಎಲ್ಲವೂ ಚರ್ಚಿಸುತ್ತಿದ್ದೆವು. ನಿಧಾನವಾಗಿ ಸಮ್ರೀನ್ ಮನಸ್ಸಿನಿಂದ ದೂರವಾಗಲಾರಂಭಿಸಿದಳು. ಸಮ್ರೀನ್ ಗಿಂತ ದುಡಿಮೆಯ ಅವಶ್ಯಕ ಯಾವಾಗ ಜಾಸ್ತಿಯಾಯಿತೋ ಅವಳು ನಿಧಾನವಾಗಿ ಮನಸ್ಸಿನಿಂದ ದೂರವಾಗಿಯೇ ಬಿಟ್ಟಳು..

ಕೆಲಸ ದುಡಿಮೆ ಅಂತ ಆತ ಹೋರಾಡಿದ್ದರಿಂದಲೋ ಏನೋ ಆತ ರಿಯಲ್ ಎಸ್ಟೇಟ್ ವ್ಯವಹಾರ ಪ್ರಾರಂಭಿಸಿದ. ಪ್ರಾರಂಭದಲ್ಲಿ ಕುಂಟುತ್ತಾ ನಡೆಯಿತಾದರೂ ಮೂರ್ನಾಲ್ಕು ತಿಂಗಳಲ್ಲಿ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಾರಂಭಿಸಿದ. ತಿಂಗಳಿಗೆ ಐವತ್ತು ಅರವತ್ತು ಸಾವಿರ ರೂಪಾಯಿಗಳ ಲಾಭ ಸಿಗುತ್ತಿತ್ತು. ತಾನಂದುಕೊಂಡಂತೆ ಸಂಪಾದನೆಯಾಗುತ್ತಿರುವಾಗ ಸಮ್ರೀನ್ ತಾಜ್ ಮತ್ತೆ ನೆನಪಿಗೆ ಬಂದಳು. ಅದಾಗಲೇ ಕಾಲ ಮಿಂಚಿಯಾಗಿತ್ತು. ಅವಳನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದುಡಿಮೆ ಹಣ ಅಂತ ಸಿಕ್ಕಾಗ ಪ್ರಿತಿ ಕಣ್ಮರೆಯಾಗಿತ್ತು. ಸಮ್ರೀನ್ ಳನ್ನು ಪಡೆಯುವ ಸಮಯವೂ ಮೀರಿ ಹೋಗಿತ್ತು...

ಒಂದು ದಿನ ಹೊನ್ನವಳ್ಳಿಗೆ ಗಜಾನನ ಬಸ್ಸಿನಲ್ಲಿ ಹೋಗುವಾಗ ಸಮ್ರೀನ್ ತಾಜ್ ನಂತೆಯೇ ಕಾಣುತ್ತಿದ್ದ ಮಾನಸಳನ್ನು ಕಂಡ. ಅವಳಲ್ಲಿ ಸಮ್ರೀನ್ ರೂಪ ಗುಣಗಳೆಲ್ಲಾ ಇದ್ದವು. ಅದೇ ಮಾತು, ಅದೇ ನಡೆ, ಯಾವುದರಲ್ಲಿಯೂ ಸಮ್ರೀನ್ ಳನ್ನು ತೆಗೆದು ಹಾಕುವಂತಿರಲಿಲ್ಲ. ಮನಸ್ಸಿನಲ್ಲಿ ಅವಿರ್ಭವಿಸಿಕೊಂಡಿದ್ದ ಪ್ರೀತಿಯ ಭಾವನೆಗಳು ಮತ್ತೆ ಚಿಗುರೊಡೆಯಲಾರಂಭಿಸಿದ್ದವು. ಮಾನಸಳನ್ನು ಹಿಂಬಾಲಿಸಿದ.  ದಿನಾಲೂ ಅವಳಿಗಾಗಿ ಬಸ್ ಸ್ಟ್ಯಾಂಡ್ ಕಾದ. ಅವಳ ಪ್ರೀತಿ ಪಡೆಯಲು ಕೆಲಸ ವಿಲ್ಲದಿದ್ದರೂ ಹೊನ್ನವಳ್ಳಿಯವರೆಗೂ ಹೋದ. ಅವಳೂ ಒಪ್ಪಿಕೊಂಡಳು. ಸಮ್ರೀನ್ ಗಿಂತಲೂ ಹೆಚ್ಚಾಗಿಯೇ ಹತ್ತಿರವಾದಳು. ಸತ್ಯನಿಗೆ ಈಗ ಯಾವುದೇ ಸಮಸ್ಯೆಗಳಿರಲಿಲ್ಲ.  ಕೈ ತುಂಬಾ ಸಂಪಾದನೆ. ಮದುವೆಯ ವಯಸ್ಸು ಬೇರೆ. ಮನೆಯವರನ್ನು ಎದುರಿಸುವಷ್ಟು ಧೈರ್ಯವೂ ಬಂದಿತ್ತು.  ಜೊತೆಗೆ ತಾನೇ ಇಷ್ಟಪಟ್ಟ ಸುಂದರ ಹುಡುಗಿ, ಮಾನಸಳ ಸಂಪೂರ್ಣ ಒಪ್ಪಿಗೆಯೂ ಇತ್ತು... ಇನ್ನೇನು ವಾಲಗ ಊದಿಸುವುದೊಂದೇ ಬಾಕಿ ಇತ್ತು....

ಅಷ್ಟರಲ್ಲಿ ನನ್ನ ವ್ಯವಹಾರ ಕೈ ಕೊಟ್ಟಿತ್ತು. ನಾನು ಊರು ಬಿಟ್ಟು ಬೆಂಗಳೂರು ಸೇರಿಕೊಂಡೆ. ಅಲ್ಲಿಂದ ಮುಂದೆ ಸತ್ಯ ಮತ್ತು ಮಾನಸಳ ಪ್ರೀತಿ ಏನಾಯಿತೋ ತಿಳಿಯಲಿಲ್ಲ.....
ಸತ್ಯ ಮತ್ತೆ ನನಗೆ ಸಿಕ್ಕಿದ್ದು ಎರಡು ವರ್ಷಗಳ ನಂತರ. ತನ್ನ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆ ನೀಡಲು ಬೆಂಗಳೂರಿಗೆ ಬಂದಾಗ. ತನ್ನ ವಿವಾಹದ ಮೊದಲ ಪತ್ರಿಕೆ ನಿನಗೆ ಕೊಡುತ್ತಿದ್ದೇನೆ ಬರಲೇ ಬೇಕು ಎಂದು ಆಹ್ವಾನಿಸಿದನು. ಕುತೂಹಲಕ್ಕೆ ಪತ್ರಿಕೆಯನ್ನು ತೆಗೆದು ಓದಲಾರಂಭಿಸಿದೆ. ನನಗೆ ಆಶ್ಚರ್ಯವಾಯಿತು. ವದುವಿನ ಹೆಸರು "ಸಿಂಚನ" ಎಂದು ಬರೆದಿತ್ತು. ಹಾಗಾದರೆ ಮಾನಸ ಏನಾದಳು...? ಅವಳೇನಾದರೂ ಸತ್ಯನನ್ನು ತಿರಸ್ಕರಿಸಿದಳೆ....? ಪ್ರೇಮ ವಿವಾಹಕ್ಕೆ ಮನೆಯವರೇನಾದರೂ ಅಡ್ಡ ಬಂದರೆ....?  ಪ್ರೇಮ ವಿವಾಹದಿಂದಾಗುವ ತೊಂದರೆಗಳಿಗೆ ಸತ್ಯ ಹೆದರಿದನೇ....? ಹೀಗೆ ಹಲವು ಪ್ರಶ್ನೆಗಳು ಮೂಡಿದವು. ಮಾನಸ ವಿಷಯದ ಬಗ್ಗೆ ಸತ್ಯನನ್ನು ಕೇಳಲು ಮನಸ್ಸಾಗಲಿಲ್ಲ. ಸಿಂಚನಾ ಬಾಳ ಸಂಗಾತಿಯಾಗಿ ಆಯ್ಕೆಯಾದ ಮೇಲೆ ಮನಸ ವಿಷಯವನ್ನು ಕೆದಕುವುದು ಸರಿಯೇ..? ಒಂದು ವೇಳೆ ಕೇಳಿದೆ ಎನ್ನಿ ಅದು ಅವನಿಗೆ ಕಹಿ ನೆನಪಾಗಿರಬಹುದು. ಅಥವಾ ಮಾನಸಾಳನ್ನು ಬಿಡಲು ಕಾರಣವಾದ ಆ ಘಟನೆ ಅವನಿಗೆ ನೋವು ತರಬಹುದು. ಎಂದು ಕೊಂಡು ಸುಮ್ಮನಾದೆ.

ಬೆಂಗಳೂರಿನ ಇನ್ನಿತರ ಮನೆಗಳಿಗೆ ಆಹ್ವಾನ ಪತ್ರಿಕೆ ಹಂಚಲು ಸತ್ಯನೊಂದಿಗೆ ಹೊರಟೆ. ಹತ್ತಾರು ಮನೆಗಳಿಗೆ ತಿರುಗಿದ ನಂತರ ಕೋರಮಂಗಲಕ್ಕೆ ಹೊರಟೆವು. ಕೋರಮಂಗಲದಲ್ಲಿರುವವರು ತುಂಬಾ ಬೇಕಾದವರು ಅಲ್ಲಿಗೆ ಹೋಗಲೇ ಬೇಕು ಎಂದು ಸತ್ಯ ಹಲವು ಬಾರಿ ಒತ್ತಿ ಒತ್ತಿ ಹೇಳಿದ್ದ. ಕೋರಮಂಗಲ ತಲುಪಿದ ಕೂಡಲೇ ಸತ್ಯನಷ್ಟೇ ವಯಸ್ಸಾದ ತರುಣನೊಬ್ಬ ಮನೆಗೆ ಕರೆದುಕೊಂಡು ಹೋದ. ಚಿಕ್ಕದಾದ ಮನೆ. ಹಾಲ್ನಲ್ಲಿ ಟಿ.ವಿ. ಯಾರಾದರೂ ಬಂದರೆ ಕುಳಿತುಕೊಳ್ಳಲು ದಿವಾನ್ ಕಾಟನ್ನು ಹಾಕಿದ್ದರು. ನವಜೋಡಿಗಳು ಆಗ ತಾನೆ ಹೊಸದಾಗಿ ಸಂಸಾರ ಹೂಡಿದಂತೆ ಕಂಡಿತು. ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ನನಗೊಂದು ಆಶ್ಚರ್ಯ ಕಾದಿತ್ತು. ಆ ತರುಣನ ಜೊತೆಗೆ ಮಾನಸ ಪತ್ನಿಯಂತೆ ನಿಂತಿದ್ದಳು. ಅದೇ ಮಾನಸ.....!!!  ಗಜಾನನ ಬಸ್ಸಿನಲ್ಲಿ ಸತ್ಯನಿಗೆ ದಿನವೂ ಸಿಗುತ್ತಿದ್ದವಳು.

ಅವಳನ್ನು ಗಮನಿಸಿ ನೋಡಿದೆ. ಕೊರಳಲ್ಲಿ ಅರಿಶಿಣ ಕುಂಕುಮದಿಂದ ಶೋಭಿತವಾದ ಮಾಂಗಲ್ಯ ಸರ ಕಾಣಿಸಿತು. ಸಂಸಾರದ ಜಂಜಾಟಗಳಿಗೆ ಸಿಲುಕಿ ಮಾನಸಳ ಮುಖ ಸ್ವಲ್ಪ ಬಾಡಿ ಹೋಗಿತ್ತು. ಅವಳ ಮನಸಿನಲ್ಲಿ ಹಲವು ಗೊಂದಲಗಳು ಇವೆಯೇನೋ ಎಂಬಂತೆ ಮುಖದ ಚರ್ಯೆ  ಪ್ರಶ್ನಾತೀತವಾಗಿ ಕಾಣಲಾರಂಭಿಸಿತು. ಸತ್ಯನನ್ನು ಕಂಡ ಕೂಡಲೇ ಮುಖದಲ್ಲಿ ಮೌನತೆ ಆವರಿಸಿಕೊಂಡಿತು. ಸತ್ಯ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ. ಮಾನಸ   'ಹ್ಞೂಂ'  ಎಂದು ಹೇಳಿದಳು ನಾವು ಅಲ್ಲಿಂದ ಹೊರಟಾಗ ಮಾನಸ ವಿನಮ್ರತೆಯಿಂದ ಕೈ ಮುಗಿದು ನಿಂತಿದ್ದಳು. ನನ್ನ ಮನಸಿನಲ್ಲಿ ಮೂಡಿದ ಹಲವು ಪ್ರಶ್ನೆಗಳಿಗೆ ಸತ್ಯನಲ್ಲಿ ಮಾತ್ರ ಉತ್ತರವಿತ್ತು.  ಎಲ್ಲಿ ಸತ್ಯ ಮಾನಸಳ ಪ್ರೀತಿಯನ್ನು  ತಿರಸ್ಕರಿಸಿದನೋ ಎಂದೆನಿಸಿತು. ನಾನು ಮಾನಸಳ ವಿಷಯ ಕೇಳಬೇಕು ಎನ್ನುವಷ್ಟರಲ್ಲಿ ಸತ್ಯ ಎಲ್ಲ ಕತೆಯನ್ನು ಹೇಳಲಾರಂಭಿಸಿದ..........

ಪ್ರತಿದಿನವೂ ಮಾನಸಳಿಗಾಗಿ ಗಜಾನನ ಬಸ್ಸಲಿ ಹತ್ತಿಕೊಂಡು ಮನಃಸ್ಪೂರ್ತಿಯಾಗಿ ಮಾತನಾಡಿ ಮುಂದಿನ ಊರಾದ ದೋನಿಯ ಕಟ್ಟೆಯಲ್ಲಿ ಇಳಿಯುತ್ತಿದ್ದೆ. ಜಾಸ್ತಿ ಮಾತು ಇದ್ದಾಗ ಹೊನ್ನವಳ್ಳಿಯ ವರೆಗೂ ಹೋಗಿ ಬರುತ್ತಿದ್ದೆ. ಹೀಗೆ ನಮ್ಮ ಪ್ರೀತಿ ಎರಡು ವರ್ಷದ ವರೆಗೂ ಮುಂದುವರೆಯಿತು. ಇದ್ದಕ್ಕಿದ್ದಂತೆ ಒಂದು ದಿನ ಮಾನಸ ತುಂಬಾ ದುಃಖದಿಂದ ಇದ್ದಳು ಕಾರಣ ಮನೆಯಲ್ಲಿ ಅವಳಿಗೆ ಗಂಡು ನೋಡಿದ್ದರು. ನಿಶ್ಚಿತಾರ್ಥ ಮುಂದಿನ ರವಿವಾರ ನಿಶ್ಚಯವೂ ಆಗಿತ್ತು. ಮಾನಸಳಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮಗೆ ಓಡಿ ಹೋಗಿ ಮದುವೆಯಾಗುವುದೊಂದೇ ದಾರಿ. ಒಂದು ದಿನ ಅದಕ್ಕೆಂದೇ ನಿರ್ಧರಿಸಿಕೊಂಡೆವು. ಆ ದಿನ ಮಾನಸ ಕಾಲೇಜ್ ಹೋಗುವ ನೆಪದಲ್ಲಿ ಹೊನ್ನವಳ್ಳಿಗೆ ಬಂದಳು. ನಾನೂ ಸಹ ಹೊನ್ನವಳ್ಳಿಗೆ ಹೋಗಿದ್ದೆ. ಮಠದಲ್ಲಿ ಸ್ವಲ್ಪ ಹೊತ್ತು ಕುಳಿತು ಮಾತನಾಡಿಕೊಂಡೆವು.
ಮಾನಸ ಅವರ ಮನೆಯಲ್ಲಿ ಹಿರಿಯ ಮಗಳು. ಚಿಕ್ಕಂದಿನಲ್ಲೇ ತಂದೆ ತೀರಿಕೊಂಡಿದ್ದರು. ಇರುವ ಎರಡು ಎಕರೆ ನೀರಾವರಿ ಜಮೀನಿನಿಂದ ಬರುವ ಆದಾಯದಲ್ಲಿ ಮಕ್ಕಳ ಓದು ಮನೆತನ ಎಲ್ಲಾ ನಡೆಯಬೇಕಿತ್ತು. ಮಾನಸಾಗೆ ಇಬ್ಬರು ಪುಟ್ಟ ತಂಗಿಯರು. ಒಬ್ಬಳು ಎಂಟನೇ ತರಗತಿ ಮತ್ತೊಬ್ಬಳು ಆರನೇ ತರಗತಿಯಲ್ಲಿ ಓದುತ್ತಿದ್ದರು. ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಮದುವೆ ಮಾಡಿ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಲು ಮಾನಸ ತಾಯಿ ಹಗಲಿರಳು ಶ್ರಮಿಸುತ್ತಿದ್ದಳು. ಗಂಡು ಮಕ್ಕಳಿಲ್ಲದ ಕುಟುಂಬಕ್ಕೆ ಹಿರಿಯ ಮಗಳ ಜವಾಬ್ದಾರಿ ಹೆಚ್ಚಿರುತ್ತದೆ. ಇಬ್ಬರು ತಂಗಿಯರ ಜವಾಬ್ದಾರಿ ಹೋರಬೇಕಾದ ಅಕ್ಕಳೇ ಮನೆತನದ ಗೌರವವನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆ ಆಗುವುದು ಸಾಧ್ಯವೇ...?  ಏನೂ ತಪ್ಪು ಮಾಡದ ಆ ಪುಟ್ಟ ತಂಗಿಯರನ್ನು ಯಾರಾದರೂ ಮದುವೆಯಾಗುತ್ತಾರೆಯೇ...? ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂದು ಜನ ಮಾತನಾಡಿಕೊಳ್ಳದೇ ಇರುತ್ತಾರೆಯೇ...?  ತನ್ನ ಈ ಪ್ರೇಮ ವಿವಾಹದಿಂದ ಇಬ್ಬರು ತಂಗಿಯರ ಜೀವನ ಹಾಳಾಗುತ್ತದೆಯೆಂದರೆ ಆ ಮದುವೆ ಯಾರಿಗೆ ಸುಖ ಸಂತೋಷ ನೀಡುತ್ತೆ ಹೇಳಿ....?  ನನ್ನ ಪರಿಸ್ಥಿತಿಯೂ ಸಹ ಮಾನಸಳ ಪರಿಸ್ಥಿತಿಗಿಂತ ಭಿನ್ನವೇನಿರಲಿಲ್ಲ. ನಾನು ಏಳನೇ ತರಗತಿ ಓದುವಾಗ ಅಪ್ಪ ತೀರಿಕೊಂಡರು. ಅಮ್ಮನಿಗೆ ಬರುವ ಪೆನ್ಷನ್ ಹಣದಿಂದ ನಮ್ಮ ಜೀವನ. ಅಪ್ಪ ಸತ್ತಾಗ ಬಂದ ಹಣದಿಂದ ನಾವು ಮೂವರು ಮಕ್ಕಳ ಭವಿಷ್ಯಕ್ಕೆಂದು ಹಣವನ್ನು ಬ್ಯಾಂಕಲ್ಲಿ ಇರಿಸಿದ್ದರು. ಆ ಹಣವೂ ಸಹ ವಿದ್ಯಾಭ್ಯಾಸಕ್ಕೆಂದು ಖಾಲಿಯಾಗಿ ಹೋಗಿತ್ತು. ಈಗ ನಾನು ದುಡಿಮೆಯ ಕಡೆಗೆ ಆದ್ಯತೆ ಕೊಡಬೇಕಿತ್ತು. ತಮ್ಮನ ಭವಿಷ್ಯವೂ ರೂಪಿಸಬೇಕಿತ್ತು. ಇಷ್ಟೆಲ್ಲಾ ಜವಾಬ್ದಾರಿಯಿರುವ ನಾವಿಬ್ಬರೂ ಮನೆತನದ ಗೌರವಗಳನ್ನು ಹರಾಜು ಹಾಕಿ ಓಡಿಹೋಗುವುದು ಸರಿ ಕಾಣಲಿಲ್ಲ. ನಿಜವಾದ ಪ್ರೀತಿ ಎಂದರೆ ಮದುವೆ ಆಗುವುದು ಒಂದೇನಾ....? ಹಾಗೆ ಮಾಡಿದರೆ ಅದು ಸ್ವಾರ್ಥ ಎನಿಸುವುದಿಲ್ಲವೇ... ನಮ್ಮಿಬ್ಬರ ಮದುವೆಯಿಂದ ನಮಗೆ ಅವಲಂಬಿಸಿದ ಇತರ ಸದಸ್ಯರ ಜೀವನ ಹಾಳಾಗುತ್ತೆ ಎನ್ನುವುದಾದರೆ ಅಂತಹ ಮದುವೆ ಯಾಕಾದರೂ ಆಗಬೇಕು...?  ನಿಜವಾದ ಪ್ರೀತಿ ಅಡಗಿರುವುದು ತ್ಯಾಗದಲ್ಲಿ. ನಿಸ್ವಾರ್ಥ ಯೋಚನೆಯಲ್ಲಿ...... ನಿಜವಾದ ಪ್ರೀತಿ ಇರುವುದು ಕರ್ತವ್ಯವನ್ನು ನಿಭಾಯಿಸುವುದರಲ್ಲಿ. ಮನೆತನದ ಗೌರವಗಳನ್ನು ಕಾಪಾಡುವುದರಲ್ಲಿ.... ನಿಜವಾದ ಪ್ರೀತಿ ಅಡಗಿರುವುದು ನಮ್ಮನ್ನು ಹೆತ್ತ ತಂದೆ ತಾಯಿಗಳಿಗೆ ನೋವನ್ನುಂಟು ಮಾಡದೇ ಇರುವುದು......
ತ್ಯಾಗ ಪ್ರೀತಿಯ ಇನ್ನೊಂದು ಮುಖ. ತ್ಯಾಗ ಮತ್ತು ಪ್ರೀತಿ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದಾಗ ಕೆಲವರಿಗೆ ಪ್ರೀತಿಯ ಮುಖ ಕಾಣುತ್ತದೆ. ಮತ್ತೆ ಕೆಲವರಿಗೆ ತ್ಯಾಗದ ಮುಖ ಕಾಣುತ್ತದೆ. ಆದರೆ ನಾವು ಎಷ್ಟು ಸಲ ನಾಣ್ಯವನ್ನು ಚಿಮ್ಮಿ ಟಾಸ್ ಹಾಕಿದರೂ ಸಹ  ತ್ಯಾಗದ ಮುಖವೇ ಕಾಣ ಸಿಗುತ್ತಿತ್ತು. ದೇವರು ನಮಗೆ ಪ್ರೀತಿಯ ಮುಖವನ್ನು ತೋರಿಸಲೇ ಇಲ್ಲ. ಕೊನೆಗೆ ಇಬ್ಬರೂ ನಿರ್ಧರಿಸಿ ತ್ಯಾಗವನ್ನೇ ಆರಿಸಿಕೊಂಡೆವು. ಅಂದು ತೆಗೆದುಕೊಂಡು ಹೋಗಿದ್ದ ಇಪ್ಪತ್ತು ಸಾವಿರ ಹಣ ಮಾನಸಳ ವಿವಾಹಕ್ಕೆ ಅನುಕೂಲವಾಗಲೆಂದು ಅವಳ ಕೈಗೆ ನೀಡಿದೆ. ಮಗಳ ಮದುವೆಗೆಂದು ಹಗಲಿರುಳು ಶ್ರಮ ವಹಿಸಿ ಸಾಲ ಸೋಲ ಮಾಡಿಕೊಂಡಿದ್ದ ಅವಳ ತಾಯಿಗೆ ಇದರಿಂದ ಸ್ವಲ್ಪ ಸಹಾಯವೂ ಆಯಿತು. ಅಲ್ಲಿಂದ ನಮ್ಮಿಬ್ಬರ ಸ್ವಾರ್ಥದ ಪ್ರೀತಿ ಮುಕ್ತಾಯವಾಗಿ... ತ್ಯಾಗದ ನಿಜವಾದ ಪ್ರೀತಿ ಪ್ರಾರಂಭವಾಯಿತು. ಅಲ್ಲಿಂದ ಇಬ್ಬರೂ ಸಂಪರ್ಕವನ್ನು ಕಳೆದುಕೊಂಡೆವು.  ಫೋನ್ ಸಹ ಮಾಡುವುದಿಲ್ಲ. ಗಂಡನ ಜೊತೆ ಆಕೆ ಎದುರು ಸಿಕ್ಕಾಗಲೂ ಸಹ ನಾವಿಬ್ಬರು ಮಾತನಾಡುವುದಿಲ್ಲ. ಆದರೆ ಈಗಲೂ ಪ್ರೀತಿಸುತ್ತೇವೆ.  ಸ್ನೇಹಿತರಂತೆ.... ಒಂದೇ ಕುಟುಂಬದಲ್ಲಿ ಬೆಳೆದ ಸದಸ್ಯರಂತೆ..... ತಾಯಿಯ ಮಮತೆಯಂತೆ.... ತಂದೆಯ ಆರೈಕೆಯಂತೆ... ಸೋದರನ ಅಕ್ಕರೆಯಂತೆ.... ಪ್ರೇಮಿಗಳ ಕನಸಿನಂತೆ ಅಷ್ಟೇ..... ಈಗ ಅವಳ್ಯಾರೋ.... ನಾನ್ಯಾರೋ... ಇದು ಇಬ್ಬರೂ ಮಾಡಿಕೊಂಡ ನಿರ್ಧಾರ"

ಅಷ್ಟು ಹೇಳಿ ಸತ್ಯ ಸುಮ್ಮನಾದ.......

ಸತ್ಯನ ಮದುವೆಯಾಗಿ ಒಂದು ತಿಂಗಳಾಗಿತ್ತು. ನಾನು ಸಹ ಊರಲ್ಲೇ ಇದ್ದೆ. ಇಬ್ಬರೂ ಗೌಡನ ಕಟ್ಟೆ ಚಾನಲ್ ಮುಂದೆ ಕಾರಿನಲ್ಲಿ ಕುಳಿತು ಜ್ಯೂಸ್ ಕುಡಿಯುತ್ತಿದ್ದವು. ನಾನು ಬೇಕಂತಲೇ ಮಾನಸ ಈಗ ಹೇಗಿದ್ದಾಳೋ ಎಂದೆ...
"ಯಾರವಳು...?"
ನನ್ನನ್ನೇ ಪ್ರಶ್ನಿಸಿದ
"ಸಿಂಚನಾ ಹೇಗಿದ್ದಾಳೋ...?"  ಎಂದೆ
"ನಿಜವಾಗಿಯೂ ನಾನು ಪುಣ್ಯವಂತ ಅವಳಂತವರು ಹೆಂಡತಿಯಾಗಿ ಸಿಗುವುದು ಲಕ್ಷಕ್ಕೊಬ್ಬರಿಗೆ ಮಾತ್ರ. ನನಗೆ, ನಮ್ಮ ಮನೆಯ ಪರಿಸರಕ್ಕೆ ಚನ್ನಾಗಿ ಹೊಂದಿಕೊಂಡಿದ್ದಾಳೆ. ನಮ್ಮ ತಂದೆ ತಾಯಿಯರು ಮಾಡಿದ ಪುಣ್ಯದ ಫಲದಿಂದಲೋ ಏನೋ ನನಗೆ ಒಳ್ಳೆಯ ಹೆಂಡತಿ ಸಿಕ್ಕಿದ್ದಾಳೆ"

ಸತ್ಯ ಸಂತೋಷದಿಂದ ಹೇಳಿದ...

ನಾನು ಸತ್ಯನ ಮಾತನ್ನು ಕೇಳಿ ಇನ್ನೊಂದು ಸಿಪ್ ಜ್ಯೂಸ್ ಹೀರಲಾರಂಬಿಸಿದೆ. ಅಷ್ಟರಲ್ಲಿ ಗಜಾನನ ಬಸ್ಸು ಜೋರಾಗಿ ಬರುತ್ತಿತ್ತು. ಈ ಸಲ ಬಸ್ಸು ಧೂಳನ್ನೆಬ್ಬಿಸಲಿಲ್ಲ. ಏಕೆಂದರೆ ಆ ರಸ್ತೆಯಲ್ಲಿ ಹೊಸದಾಗಿ ಟಾರ್ ಹಾಕಿದ್ದರು......

No comments:

Post a Comment