Friday, 26 August 2016

ಬಸ್ಸು...

ಅದು ತೊಂಬತ್ತರ ದಶಕ. ಆಗ ಕಾಲೇಜ್ ಓದುತ್ತಿದ್ದೆವು. ಹೊನ್ನಾಳಿಯ ಹಿರೇ ಕಲ್ಮಠದ ಕಾಲೇಜಿಗೆ ನಮ್ಮೂರಿನಿಂದ ದಿನವೂ ಪ್ರಯಾಣಿಸಬೇಕಿತ್ತು. ಹತ್ತೊಂಬತ್ತು ಕೀ. ಮೀ ದೂರವಿತ್ತು. ಬಸವಾಪಟ್ಟಣದಿಂದ ನಾವು ಕುಮದ್ವತಿ ಎಂಬ ಡಕೋಟ ಬಸ್ಸು ಹತ್ತಿದರೆ ಅದು ಹೊನ್ನಾಳಿ ತಲುಪಲು ಸುಮಾರು ಒಂದುವರೆ ಗಂಟೆ ಸಮಯ ತೆಗೆದು ಕೊಳ್ಳುತ್ತಿತ್ತು. ಕೇವಲ ಹತ್ತೊಂಬತ್ತು ಕಿ.ಮೀ. ಗೆ ಇಷ್ಟು ಸಮಯವೇ ಎಂದು ಹುಬ್ಬೇರಿಸಬೇಡಿ. ಆ ಬಸ್ಸಿಗೆ ಅಡೆ ತಡೆಗಳು ಜಾಸ್ತಿನೇ ಇದ್ದವು...
ನಮ್ಮೂರಿನಿಂದ ಬಸ್ಸು ಹೊರಟಿತು ಎನ್ನಿ ...ಮೂರು ಕಿ.ಮೀ ದೂರವಿರುವ ದಾಗಿನಕಟ್ಟೆ ಎಂಬ ಊರು ತಲುಪುವುದಕ್ಕೇ ಇಪ್ಪತ್ತು ನಿಮಿಷಗಳು. ಯಾಕೆಂದರೆ ಬಸ್ಸು ಹೋಗುವ ಸಮಯಕ್ಕೆ ಸರಿಯಾಗಿ ನೂರಾರು ದನ ಕರುಗಳು ಹೊಲ ಗದ್ದೆಗಳಿಗೆ ಹೋಗುತ್ತಿದ್ದವು. ಈ ದನ ಕರುಗಳು ದಾರಿಯಲ್ಲಿ ಬಸ್ಸಿಗೆ ಅಡ್ಡ ಬಂದು ನಿಂತು.... "ಅದೆಂಗೆ ಮುಂದೆ ಹೋಗ್ತಿಯಾ ನಾವು ನೋಡೇ ಬಿಡ್ತೀವಿ" ಎಂದು ಡ್ರೈವರ್ ಗೆ ಸವಾಲು ಎಸೆಯುವ ರೀತಿಯಲ್ಲಿ ನಡು ರಸ್ತೆಯಲ್ಲಿಯೇ ನಿಂತು ಬಿಡುತ್ತಿದ್ದವು. ಪಾಪ ಡ್ರೈವರ್ ಎಷ್ಟೇ ಹಾರ್ನ್ ಮಾಡಿದರೂ ಅವು ಅತ್ತಿತ್ತ ಕದಲುತ್ತಲೇ ಇರಲಿಲ್ಲ. ಕೊನೆಗೆ ಕಂಡಕ್ಟರ್ ಇಳಿದು ಕೋಲು ತೆಗೆದುಕೊಂಡು ಬಾರಿಸಿದಾಗಲೇ ರಸ್ತೆ ಬಿಟ್ಟು ಕೆಳಗೆ ಇಳಿಯಲು ಮನಸ್ಸು ಮಾಡುತ್ತಿದ್ದವು. ಪಾಪ ಕಂಡಕ್ಟರ್ ನಮ್ಮೂರಿಗೆ ಬರುವಾಗ ಯಾವಾಗಲು ಒಂದು ಆಳು ಮಟ್ಟ ಎತ್ತರದಷ್ಟು ಉದ್ದನೆಯ ಕೋಲು ಇಟ್ಟುಕೊಂಡೇ ಬರುತ್ತಿದ್ದ. ಇನ್ನು ಎಮ್ಮೆ ಅಡ್ಡ ಬಂದರಂತೂ ಮುಗೀತು. ಹಾರ್ನ್ ಶಬ್ಧಕ್ಕೆ ಡೋಂಟ್ ಕೇರ್...!!! ಬಸ್ಸಿನ ಮೂತಿ ಎಮ್ಮೆಯ ಶರೀರಕ್ಕೆ ತಿವಿದರೂ ಸಹ ಅವು ಜುಪ್ಪಯ್ಯ ಎನ್ನುತ್ತಿರಲಿಲ್ಲ.
"ಅದೇನು ಮಾಡ್ಕೊತಿಯಾ ಮಾಡ್ಕೋ ಹೋಗು.... ನಮ್ಮ ಮೇಲೆ ಬಸ್ ಹತ್ತಿಸಿದರೂ ಅಷ್ಟೆ"
ಎನ್ನುವ ರೀತಿಯಲ್ಲಿ ಎಮ್ಮೆಗಳು ತಮ್ಮ ಮೊಂಡು ಸ್ವಭಾವವನ್ನು ಪ್ರದರ್ಶಿಸುತ್ತಿದ್ದವು.
ಆ ಎಮ್ಮೆಗಳನ್ನು ಹೊಡೆದು ದಾರಿಯಿಂದ ಆಚೆ ಅಟ್ಟಿ ಬಸ್ ಗೆ ದಾರಿ ಮಾಡಿಕೊಳ್ಳುವಷ್ಟರಲ್ಲಿ ಕಂಡಕ್ಟರ್ ಗೆ ಸಾಕಾಗಿ ಹೋಗಿಬಿಡುತ್ತಿತ್ತು. ಇಷ್ಟೆಲ್ಲಾ ಸವಾಲನ್ನು ಎದುರಿಸಿ ಬಸ್ಸು ಮುಂದೆ ಹೋಗ ಬೇಕಿತ್ತು...


ಬಸ್ಸು ದಾಗಿನಕಟ್ಟೆಯ ಕೆರೆಯ ತಿರುವಿನ ಬಳಿ ತಲುಪಿತು ಎನ್ನಿ ಅಲ್ಲಿಂದ ನಾಲ್ಕೈದು ಕಿ.ಮೀ ದೂರದ ವರೆಗೂ ರಸ್ತೆಯ ತುಂಬಾ ರೈತರು ಜೋಳ, ರಾಗಿಯ ತೆನೆ ಹರಡಿರುತ್ತಿದ್ದರು. ರಸ್ತೆಯಲ್ಲಿ ಜೋಳ ಮತ್ತು ರಾಗಿಯ ತೆನೆಯೇ ಎಂದು ಆಶ್ಚರ್ಯ ಪಡಬೇಡಿ. ರಾಗಿ ಮತ್ತು ಜೋಳದ ತೆನೆಯನ್ನು ತುಳಿಸಲು ನಮ್ಮ ರೈತರು ಕಂಡುಕೊಂಡ ದಾರಿಯದು. ರೈತರು ತಾವು ಬೆಳೆದ ಧಾನ್ಯವನ್ನು ಹಸನು ಮಾಡಿ ಕಾಳು ತೆಗೆಯಬೇಕಾದರೆ ಯಾವುದಾದರೂ ಕಣವನ್ನು ಬಾಡಿಗೆ ಪಡೆಯಬೇಕಿತ್ತು. ಹೊಲದಲ್ಲಿ ಕಟಾವುಮಾಡಿದ ಆ ರಾಗಿ ಮತ್ತು ಜೋಳದ ತೆನೆಗಳನ್ನು ಹೊಲದಿಂದ ಆ ಕಣಕ್ಕೆ ಸಾಗಿಸಿ. ಆ ಕಣದಲ್ಲಿ ಕೂಲಿಯಾಳುಗಳನ್ನು ಗೊತ್ತು ಮಾಡಿ ಅಲ್ಲಿ ಕಾಳನ್ನು ಹಸನು ಮಾಡಿ ಚೀಲಕ್ಕೆ ತುಂಬಬೇಕಾದರೆ ರೈತನಿಗೆ ಖರ್ಚು ಜಾಸ್ತಿ. ಅದರ ಬದಲು ಕಟಾವು ಆದ ತೆನೆಗಳನ್ನು ಅಲ್ಲೇ ಹೊಲದ ಪಕ್ಕದಲ್ಲಿರುವ ರಸ್ತೆಗೆ ಹರಡಿದರೆ ಆಯಿತು. ಬಸ್ಸುಗಳು ತೆನೆಯ ಮೇಲೆ ಹಾದು ಹೋದರೆ ತೆನೆಯಿಂದ ಕಾಳು ತಾನಾಗಿಯೇ ಹಸನಾಗುತ್ತಿತ್ತು. ಬಸ್ಸಿನ ಚಕ್ರವನ್ನು ಡ್ರೈವರನು ಈ ತೆನೆಯ ಮೇಲೆ ನಿಧಾನವಾಗಿ ಹಾಯಿಸಬೇಕಿತ್ತು.
ಯದ್ವ ತದ್ವ ಏನಾದರೂ ಗಾಡಿ ಓಡಿಸಿದ ಎನ್ನಿ ರೈತರು ಡ್ರೈವರನ ಮೇಲೆಯೇ ಹರಿ ಹಾಯುತ್ತಿದ್ದರು. ನಮ್ಮ ಹಳ್ಳಿಗರ ಭಾಷೆ ಗೊತ್ತಲ್ಲ....!!! ಎಲ್ಲಾ ಸಂಸ್ಕೃತ, ಇಂಗ್ಲಿಷ್ ಭಾಷೆಗಳೆ....ಆ ಭಾಷೆಯನ್ನು ಅರಗಿಸಿಕೊಳ್ಳಲಾಗದ ಆ ಡ್ರೈವರನು ದಾಗಿನಕಟ್ಟೆಯ ಆಸುಪಾಸಿನಲ್ಲಿ ಬಸ್ಸನ್ನು ಆಮೆಯ ನಡಿಗೆಯಂತೆ ನಡೆಸುತ್ತಿದ್ದ.

ಬಸ್ಸು ದಾಗಿನಕಟ್ಟೆಯ ನಿಲ್ದಾಣ ತಲುಪುತ್ತಿದ್ದಂತೆ ಡ್ರೈವರ್ ಬಸ್ ನ ಇಂಜಿನೆ ಆಫ್ ಮಾಡಿಕೊಂಡು ನಿರುಮ್ಮಳನಾಗಿ ಕುಳಿತುಕೊಳ್ಳುತ್ತಿದ್ದ. ಯಾಕೆ ಅಂತಿರಾ...? ದಾಗಿನ ಕಟ್ಟೆಯಿಂದ ನಮ್ಮ ಕಾಲೇಜಿಗೆ ಓದಲು ಹಲವಾರು ಹುಡುಗಿಯರು ಬರುತ್ತಿದ್ದರು. ಎಲ್ಲಾ ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳೇ... ಒಬ್ಬ ಹುಡುಗಿಯನ್ನು ಬಿಟ್ಟು ಹೋದರೆ ಮುಗಿತು. ಊರಿನ ಜನ ಆ ಬಸ್ಸನ್ನು ಸುತ್ತಲೂ ಮುತ್ತಿಕೊಂಡು ಅಲ್ಲೇ ನಿಂತಿರುವ ಎತ್ತಿನ ಗಾಡಿಯ ಕೀಲೆಣ್ಣೆಯಿಂದ ಬಸ್ಸಿನ ಮೇಲೆ ಅಸಹ್ಯವಾದ ಪದಗಳನ್ನು ಬರೆದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು. ಆದ್ದರಿಂದ ಸ್ವಲ್ಪ ತಡವಾದರೂ ಸಹ ಡ್ರೈವರ್ ಅವರನ್ನೆಲ್ಲಾ ಹತ್ತಿಸಿಕೊಂಡೆ ಮುಂದೆ ಹೋಗುತ್ತಿದ್ದನು. ಇದರಲ್ಲಿ ಡ್ರೈವರನದೂ ಸ್ವಲ್ಪ ಸ್ವಾರ್ಥ ಮತ್ತು ಆಸೆ ಇರುತ್ತಿತ್ತು.....
ಕಾಲೇಜಿಗೆ ಹೋಗುತ್ತಿದ್ದ ಆ ಕನ್ಯಾ ಮಣಿಗಳು ಆಗ ತಾನೆ ಸ್ನಾನ ಮಾಡಿಕೊಂಡು, ಶುಭ್ರವಾದ ಲಂಗ ದಾವಣಿಯನ್ನು ಹಾಕಿಕೊಂಡು. ಪುಸ್ತಕಗಳನ್ನು ಎದೆಗೆ ಒತ್ತಿ ಹಿಡಿದು ಬಸ್ಸನ್ನು ಹತ್ತುತ್ತಿದ್ದರೆ. ಆ ಅಂದವನ್ನು ನೋಡುವುದೇ ಡ್ರೈವರ್ ಕಂಡಕ್ಟರ್ ಗಳಿಗೆ ಏನೋ ಒಂಥರಾ ಖುಷಿ. ಇಂಥಹ ಸುಂದರ ಬೆಡಗಿಯರನ್ನು ಡ್ರೈವರ್ ತನ್ನ ಆಸುಪಾಸಿನಲ್ಲಿಯೇ ಸೀಟಿದ್ದರೆ ಕುಳ್ಳಿರಿಸಿ ಕೊಳ್ಳುತ್ತಿದ್ದ , ಇಲ್ಲದಿದ್ದರೆ ನಿಲ್ಲಿಸಿಕೊಳ್ಳುತ್ತಿದ್ದ. ಕಾಲೇಜ್ ಹುಡುಗಿಯರ ಮಧ್ಯೆ ವಿರಾಜಮಾನವಾಗಿ ಕುಳಿತು ಬಸ್ಸು ಓಡಿಸುತ್ತಿದ್ದ ಚಾಲಕನ ಆ ಗತ್ತು ಹೇಳತೀರದು. ಆಗ ಆತ ಥೇಟ್ ಶ್ರೀಕೃಷ್ಣ ಪರಮಾತ್ಮನೇ ಆಗಿ ಬಿಡುತ್ತಿದ್ದ. ಎಲ್ಲಿಲ್ಲದ ಉತ್ಸಾಹ ಹುಮ್ಮಸ್ಸುಗಳನ್ನು ಆತನಲ್ಲಿ ತಾನಾಗಿಯೇ ಮೂಡಿ ಬರುತ್ತಿದ್ದವು. ಆಗಾಗ ಹುಡುಗಿಯರು ಎದೆಗೆ ಒತ್ತಿ ಹಿಡಿದುಕೊಂಡ ಆ ಬುಕ್ ಗಳ ಕಡೆಗೆ ಕಳ್ಳ ನೋಟವನ್ನು ಬೀರುತ್ತಿದ್ದ.....
ಬಸ್ಸು ಕಂಚುಗಾರನ ಹಳ್ಳಿಯ ತಿರುವಿನ ಬಳಿ ಹೋಗುವಷ್ಟರಲ್ಲಿ. ಬಸ್ಸಿಗಾಗಿ ಹತ್ತಾರು ಸೊಪ್ಪು ಮಾರುವ ರೈತ ಹೆಗಸರು ಕಾಯುತ್ತಾ ನಿಂತಿರುತ್ತಿದ್ದರು. ಬಸ್ ನಿಲ್ಲಿಸಿದ ಕೂಡಲೇ ಕಂಡಕ್ಟರನು ಆ ಸೊಪ್ಪಿನ ಪುಟ್ಟಿಗಳನ್ನು ಬಸ್ಸಿನ ಟಾಪ್ ಮೇಲೆ ಒಂದೊಂದಾಗಿ ಜೋಡಿಸಿ, ಅವು ಬೀಳದಂತೆ ಹಗ್ಗದಿಂದ ಬಿಗಿಯುತ್ತಿದ್ದನು. ಈ ಎಲ್ಲಾ ಕೆಲಸ ಮುಗಿಸಿ ಬಸ್ ಮುಂದಕ್ಕೆ ಹೊರಡಲು ಗ್ರೀನ್ ಸಿಗ್ನಲ್ ಕೊಡುವಷ್ಟರಲ್ಲಿ ಹತ್ತು ಹನ್ನೆರಡು ನಿಮಿಷ ವ್ಯಯವಾಗುತ್ತಿತ್ತು. ಬಸ್ಸಿನ ಮಂದಗತಿಯ ವೇಗ ಮತ್ತು ಬಸ್ಸಿನ ಇಷ್ಟೆಲ್ಲಾ ಅವಾಂತರಗಳನ್ನು ವೀಕ್ಷಿಸುತ್ತಾ ಬಂದ ಪ್ರಯಾಣಿಕರಿಗೆ ಬಸ್ಸಿನ ಡ್ರೈವರ್ ನ್ನು ಸಾಯಿಸಿಬಿಡಬೇಕು ಎನ್ನುವಂತಹ ಕೋಪ ಬರುತ್ತಿತ್ತು.

ಅಷ್ಟೇ ಅಲ್ಲದೇ ಬಸ್ಸು ಜನರಿಂದ ತುಂಬಿ ತುಳುಕುತ್ತಿತ್ತು. ಹೆಜ್ಜೆ ಇಡಲೂ ಸಹ ಪರದಾಡಬೇಕಾದ ಆ ಪರಿಸ್ಥಿತಿಯಲ್ಲಿ ಕಂಡಕ್ಟರನು ಯಾವ ಪ್ರಯಾಣಿಕರನ್ನು ಬಿಟ್ಟು ಹೋಗಲು ಮನಸ್ಸು ಮಾಡುತ್ತಿರಲಿಲ್ಲ. ಪ್ರಯಾಣಿಕರನ್ನೆಲ್ಲಾ ಹತ್ತಿಸಿಕೊಳ್ಳುತ್ತಿದ್ದ ಆ ಕಂಡಕ್ಟರ್ ಗೋಡೌನ್ ನಲ್ಲಿ ಭತ್ತದ ಮೂಟೆಗಳನ್ನು ಒಂದು ಕಡೆಯಿಂದ ಸರಿಯಾಗಿ ಜೋಡಿಸಿಕೊಂಡು ಬರುವಂತೆಯೇ ಬಸ್ಸಿನಲ್ಲಿ ಜನರನ್ನು ಒಂದು ಕಡೆಯಿಂದ ನೀಟಾಗಿ ನಿಲ್ಲಿಸಿಕೊಂಡು ಬರುತ್ತಿದ್ದನು. ಅವನು ಪ್ರಯಾಣಿಕರನ್ನು ಇಕ್ಕಟ್ಟಾಗಿ ನಿಲ್ಲಿಸುತ್ತಿದ್ದ ಆ ಪರಿ ಹೇಗಿರುತ್ತಿತ್ತು ಎಂದರೆ. ಪ್ರಯಾಣಿಕರು ತಮ್ಮ ಅಂಡುಗಳನ್ನು ಸಹ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಎತ್ತಿನ ಗಾಡಿಯಂತೆ ನಿಧಾನವಾಗಿ ಬಸ್ಸು ಓಡಿಸುತ್ತಿದ್ದ ಆ ಡ್ರೈವರ್ ನನ್ನು ಹಿಡಿದು ಚಚ್ಚಬೇಕು ಎನ್ನುವಷ್ಟು ರೋಷವೇಷಗಳು ತಾನಾಗಿಯೇ ಉಕ್ಕಿ ಬರುತ್ತಿದ್ದವು..... ಪಾಪ ಡ್ರೈವರನದೇನು ತಪ್ಪು ಹೇಳಿ....? ಆ ಸಮಯಕ್ಕೆ ಇರುವುದೊಂದೇ ಬಸ್ಸು ಎಲ್ಲಾ ಪ್ರಯಾಣಿಕರನ್ನು ಹೊತ್ತೊಯ್ಯುವ ಜವಬ್ದಾರಿ ಅವನದು.....
ಅಲ್ಲಿಂದ ಮುಂದೆ ಬಸ್ಸು ರಸ್ತೆಯಲ್ಲಿರುವ ಹಳ್ಳ ತಗ್ಗುಗಳನ್ನು ದಾಟಿ ಮುಂದೆ ಸಾಗಬೇಕಿತ್ತು. ಬಸ್ಸಿನ ಚಕ್ರ ರಸ್ತೆಯಲ್ಲಿರುವ ಗುಂಡಿಗೆ ಇಳಿಯದಂತೆ... ಬಸ್ಸಿಗೆ ಯಾವ ರೀತಿಯಿಂದಲೂ ಹಾನಿಯಾಗದಂತೆ ಡ್ರೈವರನು ಬಹು ಎಚ್ಚರದಿಂದ ಚಾಲನೆ ಮಾಡುತ್ತಿದ್ದನು. ಎಲ್ಲಿ ಬಸ್ಸಿಗೆ ಹಾನಿಯುಂಟಾದರೆ ಬಸ್ಸಿನ ಮಾಲೀಕ ತನ್ನ ಸಂಬಳದಲ್ಲಿ ಹಣ ಹಿಡಿದುಕೊಳ್ಳುವನೋ ಎಂಬ ಭಯ ಅವನಿಗೆ. ಆದಷ್ಟು ನಿಧಾನವಾಗಿ ಹೂವಿನ ಹಾಸಿಗೆ ಮೇಲೆ ನಡೆಸಿದಂತೆಯೇ ಬಸ್ಸನ್ನು ನಿಧಾನವಾಗಿ ಸಾಗಿಸುತ್ತಿದ್ದನು...
ಬೆನಕನಹಳ್ಳಿ ತಲುಪಿದ ಕೂಡಲೇ ಬುಡೇನ್ ಸಾಬ್ ಮಂಡಕ್ಕಿ ಮೂಟೆಗಳನ್ನು ಬಸ್ಸಿನ ಮೇಲೆ ಹೇರುತ್ತಿದ್ದನು.... ಅಲ್ಲಿ ಒಂದ್ಹತ್ತು ಬಸ್ಸು ನಿಂತುಕೊಂಡು ಸುಧಾರಿಸಿಕೊಳ್ಳುತ್ತಿತ್ತು. ಅಲ್ಲಿಂದ ಮುಂದೆ ಬಸ್ಸು ಕೆಲವು ಹಳ್ಳಿಗಳನ್ನು ದಾಟಿ, ಅಲ್ಲಲ್ಲಿ ನಿಲ್ಲುತ್ತಾ.... ಸುಧಾರಿಸಿತೊಳ್ಳುತ್ತಾ.....ಗರ್... ಗರ್... ಗರ್ .... ಎಂದು ಘರ್ಜಿಸುತ್ತಾ....... ಒಳಗಡೆ ಸುಸ್ತಾಗಿ ನಿಂತಿದ್ದ ಪ್ರಯಾಣಿಕರ ಹಿಡಿ ಶಾಪವನ್ನು ಸಹಿಸಿಕೊಳ್ಳುತ್ತಾ......ನಿಲ್ಲಿಸಿ ಬಸ್ಸು ತನ್ನ ಗುರಿಯತ್ತ ನಿಧಾನವಾಗಿ ತಲುಪುತ್ತಿತ್ತು. ಹಾಗೋ ಹೀಗೋ ಮಾಡಿ ನಮ್ಮನ್ನು ಹೊನ್ನಾಳಿಯ ವರೆಗೆ ತಲುಪಿಸಿದ ಸಾಹಸ ಕೀರ್ತಿ ಆ ಡ್ರೈವರನಿಗೆ ಸಲ್ಲುತ್ತಿತ್ತು. ಬಸ್ಸಲ್ಲೇ ಹಣ್ಣುಗಾಯಿ ನೀರುಗಾಯಿಗಳಾಗಿದ್ದ ನಾವು ಕಾಲೇಜಿನ ಕಡೆಗೆ ಆಯಾಸದ ಪೆಚ್ಚು ಮೋರೆ ಹಾಕಿಕೊಂಡು ನಡೆದು ಹೋಗುತ್ತಿದ್ದವು....
ಹಾಗೆ ನೋಡಿದರೆ ನಾವು ಕಾಲೇಜಿನಲ್ಲಿ ಓದಿ ದಬಾಕಿದ್ದು ಅಷ್ಟಕ್ಕಷ್ಟೇ. ನಮಗೆ ನಿಜವಾದ ಜೀವನ ದರ್ಶನವಾಗಿದ್ದು ಬಸ್ಸಿನಲ್ಲಿ. ಹಲವು ಜನರನ್ನು ಭೇಟಿಯಾದದ್ದು. ಜನರ ನೋವು ನಲಿವುಗಳನ್ನು ಕಂಡದ್ದು ಆ ಬಸ್ಸಿನಲ್ಲಿಯೇ. ಟಿಕೇಟ್ ದರ ಹೆಚ್ಚಾಯಿತೆಂದು ಕಂಡಕ್ಟರ್ ಮೇಲೆ ಜಗಳ ತೆಗೆಯುತ್ತಿದ್ದ ಹಳ್ಳಿಯ ಹೆಂಗಸರು ಹಣದ ಬೆಲೆ ಏನೆಂಬುದನ್ನು ತಿಳಿಸಿಕೊಟ್ಟಿದ್ದರು. ದಿನ ಪೂರ್ತಿ ಕೂಲಿ ಮಾಡಿ ಕಷ್ಟ ಪಡುತ್ತಿದ್ದ ಆ ಹೆಂಗಸರು ಕಂಡಕ್ಟರ್ ಬಳಿ ಸ್ವಲ್ಪ ಚೌಕಾಸಿ ಮಾಡಿದರೆ ನಾಕಾಣೆಯಾದರೂ ತಮ್ಮ ಮಕ್ಕಳಿಗೆ ಉಳಿಸಬಹುದೆಂಬ ಆಸೆ ಅವರ ಮಾತಿನಲ್ಲಿ ಕಾಣುತ್ತಿತ್ತು. ದುಡಿಮೆಯ ಕಷ್ಟಗಳು. ತಂದೆ ತಾಯಿಯರು ಮಕ್ಕಳಿಗಾಗಿ ಪಡುತ್ತಿದ್ದ ನೋವುಗಳು ನಾವು ಬಸ್ಸಿನಲ್ಲೇ ಕಾಣುತ್ತಿದ್ದವು....
ಮುಂದಿನ ಕೆಲವು ಸೀಟಿನಲ್ಲಿ ಕುಳಿತ್ತಿದ್ದ ಹೆಂಗಸರಿಂದ ಅತ್ತೆ ಸೊಸೆ ಜಗಳದ ವಿಷಯಗಳು ಪ್ರಸ್ತಾಪವಾಗುತ್ತಿದ್ದವು. ಕೆಲವು ಸಲ ನಮಗೆ ಅತ್ತೆ ಸರಿಯೆಂದು ಕಾಣಿಸಿದರೆ ಕಲವೊಂದು ಸಲ ಸೊಸೆಯದು ಸರಿಯೆಂದೆನಿಸುತ್ತಿತ್ತು. ಈ ಜಗಳದ ಮಾತುಗಳು ನಮಗೆ ಚಿಂತನೆಗೀಡುಮಾಡುತ್ತಿದ್ದವು. ಇಲ್ಲಿ ಕೇಳಿದ ಕತೆಗಳು, ಜಗಳದ ಸ್ವರೂಪಗಳು, ಸಂಭಾಷಣೆಗಳು ಇದು ವರೆಗೂ ಯಾವ ಧಾರಾವಾಹಿಗಳಲ್ಲಿ ಬಿತ್ತರವಾಗಿಲ್ಲ.... ಯಾವ ಟಿ. ವಿ. ಚಾನಲ್ ಗಳು ತೋರಿಸಿಲ್ಲ.... ಇಲ್ಲಿಯ ಹಲವು ವಿಷಯಗಳು ನಮ್ಮ ಮನೆಯ ಕನ್ನಡಿಯಂತೆಯೇ ಕಾಣುತ್ತಿದ್ದವು....
"ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ, ಮದುವೆಗೋ ಮಸಣಕೋ" ಎಂಬಂತೆ ದಿನವೂ ಪಯಣಿಸುತ್ತಿದ್ದ ಜನರು ಗೊತ್ತು ಗುರಿಯಿಲ್ಲದ ಗಂತವ್ಯದತ್ತ ಸಾಗುತ್ತಿದ್ದಾರೋ ಎಂದೆನಿಸುತ್ತಿತ್ತು. ಯಾವಾಗ ಊರು ತಲುಪುವೆವೋ ಎಂಬಂತೆ ಬಸ್ಸು ಹತ್ತುವವರ ಆತುರದ ನಡವಳಿಕೆಗಳು... ಯಾವಾಗ ಮನೆ ತಲುಪುವೆನೋ ಎಂಬಂತೆ ಬಸ್ಸಿನಿಂದ ಇಳಿಯುವವರ ಕಾತುರ ನಿರೀಕ್ಷೆಗಳು..... ಮತ್ತೆನನ್ನೋ ಹೇಳಲು ಹೊರಟಂತೆ ಕಾಣುತ್ತಿದ್ದವು...
ಇನ್ನು ಪ್ರಯಾಣಿಕರ ಲಗೇಜುಗಳನ್ನು ನೋಡಬೇಕು. ಒಂದೆರಡು ದಿನ ಪರವೂರಿನ ಬೀಗರ ಮನೆಯಲ್ಲಿ ನೆಲೆಸಲು ಹೊರಟ ಪ್ರಯಾಣಿಕರು ಸಂಸಾರ ಹೂಡಲು ಹೊರಟಿರುವಂತೆ ದೊಡ್ಡ ದೊಡ್ಡ ಬ್ಯಾಗುಗಳನ್ನು ಹೊತ್ತು ನಡೆಯುತ್ತಿದ್ದರು. ಕೆಲವರು ಹಬ್ಬಕ್ಕೆ ಹೊರಟಿದ್ದರೆ. ಮತ್ತೆ ಕೆಲವರು ತಿಥಿಗೆ. ಇನ್ನು ಹಲವರು ನಾಮಕರಣಕ್ಕೋ... ಮುಂಜಿಗೋ... ತಂದೆ ತಾಯಿಯರನ್ನು ನೋಡಲೋ ಅಥವಾ ಅವರ ಶ್ರಾದ್ಧಕ್ಕೋ.... ರೋಗಿಗಳನ್ನು ಕಾಣಲೋ ಅಥವಾ ಸೌಖ್ಯರನ್ನು ಮಾತನಾಡಿಸಲೋ.. ಹೀಗೆ ಅವರವರು ಹೊರಟಿರುವ ಗುರಿ ಮತ್ತು ಉದ್ದೇಶಗಳಿಗುಣವಾಗಿ ಅವರವರ ಮುಖ ಭಾವಗಳು ಕಾಣುತ್ತಿದ್ದವು...
ಮತ್ತೆ ಕೆಲವರು ಕುಳಿತು ಕೊಳ್ಳುವ ಸೀಟಿಗಾಗಿ ಜಗಳ. ಅರ್ದ ತಾಸು ಪ್ರಯಾಣಕ್ಕೆ ಜೀವನ ಪೂರ್ತಿ ಬಸ್ಸಿನಲ್ಲೇ ಕೂರುವೆನೆಂಬಂತಹ ಆಲೋಚನೆ ಅವರಿಗೆ. ಸ್ವಲ್ಪ ಸಮಯದ ಸುಖಕ್ಕೂ ಹಾತೊರೆಯುವ ಈ ಜನರನ್ನು ಕಂಡ ನಮಗೆ ಈ ಸಮಾಜದಲ್ಲಿ ಎಷ್ಟೊಂದು ಸ್ವಾರ್ಥ ದುರಾಸೆಗಳು ಇವೆ ಎಂದೆನಿಸುತ್ತಿತ್ತು. ದೇವರು ಏನಾದರೂ ಮನುಷ್ಯನಿಗೆ ಸಾವೇ ಇಲ್ಲ ಎಂದಿದ್ದರೆ ಇನ್ನು ಏನೇನು ಅನಾಹುತಗಳು ಜರುಗುತ್ತಿದ್ದವೇನೋ.....!!! ಬಸ್ಸಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕಂಡರೆ ನಾವು ಯಾವುದೋ ಲೋಕಕ್ಕೆ ತೇಲಿ ಹೋಗುತ್ತಿದ್ದೆವು. " ಗಾನ ಯಾವುದೋ ಗೂಢ ಭಾವವನು ಬಿಚ್ಚುತಿಹದು" ಎಂದು ದಾಸರ ಪದ ದಂತೆಯೇ... ಬಸ್ಸು ಯಾವುದೋ ಭಾವವನ್ನು ಮೂಡಿಸುತ್ತಿತ್ತು. ಬಸ್ಸಿನಲ್ಲಿ ನಡೆಯುವ ಮಾತುಗಳು ಯಾವ ಉಪದೇಶ, ಪ್ರವಚನಗಳಿಗಿಂತಲೂ ಕಡಿಮೆ ಇರಲಿಲ್ಲ. ಹಿರಿಯರ ಬಿಟ್ಟಿ ಸಲಹೆಗಳು. ಹೆಂಗಸರ ಮನೆತನದ ಕತೆಗಳು. ರಾಜಕೀಯ ವಿಷಯಗಳು, ಕುಡುಕರ ತೊದಲು ನುಡಿಗಳು, ಕಾಲೇಜು ಹುಡುಗರ ಚೇಷ್ಟೆಗಳು, ಹುಡುಗಿಯರ ಕಳ್ಳ ನೋಟಗಳು, ಲೈನು ಹೊಡೆಯುತ್ತಿರುವ ಪೋಕರಿಗಳು, ಮಳೆ,ಬೆಳೆ, ಹವಮಾನ, ಭವಿಷ್ಯ ಹೀಗೆ ಹತ್ತು ಹಲವಾರು ವಿಷಯಗಳನ್ನು ಕೇಳಿದ್ದು ಕಲಿತದ್ದು ಬಸ್ಸಿನಲ್ಲಿಯೇ....
ಮೊನ್ನೆ ಹವಾನಿಯಂತ್ರಿತ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿ ಯಾವ ವಿಶೇಷತೆಯೂ ಇರಲಿಲ್ಲ. ಅವರವರ ಮೊಬೈಲಲ್ಲಿ ಬ್ಯೂಸಿಯಾಗಿರುವ ಆಧುನಿಕ ಶ್ರೀಮಂತರನ್ನು ಕಂಡು ಬೇಸರವೆನಿಸಿತು. ಮಾತಿಲ್ಲ ...ಕತೆಯಿಲ್ಲ.. ಜನರೊಡನೆ ಬೆರೆಯಬೇಕೆಂಬ ಉತ್ಸಾಹವೂ ಅವರಲ್ಲಿರಲಿಲ್ಲ... ಜೀವನದ ನಿಜವಾದ ಪಾಠಗಳು ಸಿಗುವುದೇ ಜನ ಸಾಮಾನ್ಯರಲ್ಲಿ ಬೆರೆತಾಗಲೇ ಮಾತ್ರ.....
ಅದು ಜನ ಸಾಮಾನ್ಯರು ಪ್ರಯಾಣಿಸುವ ಡಕೋಟ ಬಸ್ಸಿನಲ್ಲಿ. ಪ್ಯಾಸೆಂಜರ್ ರೈಲಿನಲ್ಲಿ ಮಾತ್ರವೇ ಎಂದೆನಿಸಿತು. ಮೂರು ವರ್ಷದ ನಮ್ಮ ಬಸ್ಸಿನ ಓಡಾಟವು ನಮಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಟ್ಟಿತ್ತು. ಬಸ್ಸು ಕಲಿಸಿದ ಆ ಪಾಠ ಯಾವ ವಿಶ್ವ ವಿದ್ಯಾಲಯಕ್ಕಿಂತ ಕಡಿಮೆಯೇನು ಇರಲಿಲ್ಲ......

No comments:

Post a Comment