Wednesday 13 January 2016

ಜೇಡನ ಬಲೆ


ಜೇಡನ ಬಲೆ






















ಎಂತಹ ವಕ್ರ ವಿನ್ಯಾಸದ ವರ್ತುಲ
ಹದವಾದ ಮೃದುವಾದ ರೇಷಿಮೆ ನೂಲಿನಲಿ
ರೇಖೆಗಳು ತ್ರಿಕೋನಗಳು ವಕ್ರ ರೂಪಗಳು
ರೇಖಾಗಣಿತ ಸೂತ್ರಕೂ ಮೀರಿ ನಿಂತಿಹದು
ಗೀಚಿ ಬರೆದ ಸುಂದರ ವೃತ್ತವದು
ದೇವರು ನೀಡಿದ ಸುಂದರ ಕಲೆಯದು

ಎಲ್ಲಾ ವೀರ ಅಭಿಮನ್ಯುಗಳು ಆರಂಭದಲಿ
ಬಲೆಯಲಿ ನುಗ್ಗುವರು ನಚ್ಚುವರು
ಯಾರಿಹರಿಲ್ಲಿ ಸವ್ಯಸಾಚಿ
ಕೌರವರ ವಿದ್ರೋಹದ ಜಾಲವಿದು
ಭೇದಿಸಲಾಗದ ಚಕ್ರವ್ಯೂಹವಿದು
ರಚನೆಯಾದ ಮೋಸದ ಖೆಡ್ಡವಿದು...

ಹೊಂಚುಹಾಕುತಿಹುದು ಕೆಡವಿ ತಿನ್ನಲು ಮಿಕವನು
ಬಲೆಯಲಿ ಸಿಲುಕಿಸಿ ಸಾಯಿಸಿ
ಒದ್ದಾಡಿಸಿ ಅಟ್ಟಾಡಿಸಿ
ನರನರ ನರಳಿಸಿ
ಕಾಯಿಸಿ ಬೇಯಿಸಿ
ಬಲಿ ಪಡೆಯಿತು ಸ್ವಾರ್ಥದ ಬಯಕೆಗೆ....

ಖೆಡ್ಡ ಎಂದೆನೇ..? ಯಾವುದು ಖೆಡ್ಡ...?
ಅದಕ್ಕೆ ಅದರದೇ ಪ್ರಕೃತಿ ನಿಯಮವೂ
ಅದೇ ನೀತಿ ಅದೇ ಹೊಟ್ಟೆಪಾಡಿನ ಧರ್ಮವು..
ಧರ್ಮ ಕರ್ಮ ನೀತಿ ನಿಯಮ ಮೀರುವವನು
ದೇವರು ಎಳೆದ ಗೆರೆಯನು ದಾಟುವವನು
ಮಾನವ ಮಾತ್ರ, ಅವನದ್ದೇ ಷಡ್ಯಂತ್ರದ ವ್ಯೂಹ

ರಾಜನೊಬ್ಬ ಕಲಿಯಲಿಲ್ಲವೇ ಯಶಸ್ಸಿನ ಪಾಠವ
ಮರಳಿ ಯತ್ನಿಸು.. ಮರಳಿ ಯತ್ನಿಸು...
ಗಾಂಭಿರ್ಯಕ್ಕೆ ಆನೆ, ಶೌರ್ಯಕ್ಕೆ ಸಿಂಹ
ನಿಯತ್ತಿಗೆ ನಾಯಿ, ಸತ್ಯಕ್ಕೆ ಗೋವು
ಮರಳಿ ಯತ್ನಕ್ಕೆ ಜೇಡ
ಮಾನವನೆಲ್ಲಿಗೆ ಸಲ್ಲುವನು.....?
- ಪ್ರಕಾಶ್.ಎನ್.ಜಿಂಗಾಡೆ

No comments:

Post a Comment