Sunday 11 September 2016

ತಲೆಗಳು (poem)

ತಲೆಗಳು

ಇಂದು ಕ್ಷೌರದಂಗಡಿಗೆ ಹೋಗಿದ್ದೆ
ಅವದೇನು ಕಲೆ ಅದೆಂತಹ ಮಾತ್ರಿಕ ಸ್ಪರ್ಶ
ಕ್ಷೌರಿಕನ ತಾಳ ಲಯಬದ್ದವಾದ ಬಡಿತಕೆ
ಎಷ್ಟೋ ತಲೆಗಳು ಸೋತಿದ್ದವು
ಎಷ್ಟೋ ತಲೆಗಳು ನಿದ್ರೆಗೆ ಜಾರಿದ್ದವು
ಅದೆಷ್ಟೋ ತಲೆಗಳು ಅಮಲೇರಿದ್ದವು
ಸುಖದಿಂದಲೂ ಮುಳುಗಿ ಯಾವುದೋ
ಹೊಸದೊಂದು ಲೋಕಕ್ಕೆ ಜಾರುತ್ತಿದ್ದವು

ಕೆಲವರದು ಚಿಕ್ಕದಾದ ನಯವಾದ ತಲೆ
ಕೆಲವರದು ದೊಡ್ಡದಾದ ತಗಡು ತಲೆ
ಮತ್ತೆ ಕೆಲವರದು ಕೊಳಕಾದುದು,ಸ್ವಚ್ಛವಾದುದು
ಜಾಣತನದ್ದು, ಮೊಂಡುತನದ್ದು,
ಬುದ್ದಿಹೀನದ್ದು ಲಜ್ಜೆಗೆಟ್ಟದ್ದು
ವಿಧವಿದವಾದದ್ದು ವಿಭಿನ್ನ ವಾದದ್ದು
ಆದರೆ ಅದರೊಳಗಿನ ಯೋಚನಾ ಲಹರಿಯೋ ?
ಬ್ರಹ್ಮನೊಬ್ಬನೆ ಅರಿವನು.....

ನನಗೊಂದು ಆಶ್ಚರ್ಯ
ಬ್ರಹ್ಮ ಅದೆಂತಹ ಅದ್ಭುತ ಕುಂಬಾರನೋ
ಯಾವ ಕೈಗಳಿಂದ ನಿರ್ಮಿಸಿದನೋ
ಅದ್ಯಾವ ಮಂತ್ರಶಕ್ತಿಯನು ತುಂಬಿದನೋ
ಜೀವರಾಶಿಗಳಿಗೂ ಮಿಗಿಲಾಗಿ
ಇಂದ್ರಜಾಲ ಅದರೊಳಗೆ ತುಂಬಿಸಿ
ಕಲ್ಪನಾ ಯೋಚನಾ ಶಕ್ತಿಗಳನು ಬೆರೆಸಿ
ಧರೆಯೊಳಗೆ ತಂದು ಬಿಟ್ಟನು....

ಜೋಪಾನವಾಗಿಡುವುದರಲ್ಲಿ ನಾವು ಜಾಣರು
ಅಮ್ಮ ಕೊಟ್ಟ ಬಂಗಾರ ಕಾಪಾಡುತ್ತೇವೆ
ಅಪ್ಪ ಕೊಟ್ಟ ಆಸ್ತಿ ಕಾಯುತ್ತೇವೆ
ದೇವರು ಕೊಟ್ಟ ಈ ತಲೆಯನ್ನು ಕಾಪಾಡಿಕೊಳ್ಳದೇ
ಹೊಲಸಾಗಿಸಿ ಮಲಿನಗೊಳಿಸಿದ್ದೇವೆ
ದುರ್ವಿಚಾರಗಳನು ತುಂಬಿಕೊಂಡು
ಕಳಕು ಕೊಚ್ಚೆಯೆಡೆಗೆ ಸಾಗುತ್ತಿದ್ದೇವೆ
ಎಲ್ಲವೂ ಸ್ವಾರ್ಥಕ್ಕಾಗಿ .......

           ಪ್ರಕಾಶ್. ಎನ್. ಜಿಂಗಾಡೆ.

No comments:

Post a Comment