Thursday 15 March 2018

ಹೇ..! ಮಾನವ


ಹೇ..! ಮಾನವ
ನಿನ್ನದೂ ಎಂತಹ ಸ್ವಾರ್ಥ ಬದುಕು..?
ನದಿಯ ನೀರನೇ ಕುಡಿವೆ
ನದಿಯನೇ ನಾಶಗೈಯುವೆ
ಒಣಗಿ ನಿಂತಿಹ, ಬತ್ತಿ ಬಾಡಿಹ
ಜಲ ವಿನಾಶಕೆ ಕಾರಣನಾಗಿ
ಜ್ಞಾನಿ ಎಂದು ಮೆರೆಯುತಿರುವೆ...

ಹೇ..! ಮಾನವ
ಎಲ್ಲಿದೆ ನಿನ್ನಲಿ ಪಾವಿತ್ರ್ಯತೆ ..?
ಸಪ್ತ ನದಿಯ ಮಂತ್ರವ ಹೇಳುವೆ
ಪವಿತ್ರ ಜಲವೆಂಬಂತೆ ಪ್ರಾರ್ಥಿಸುವೆ
ಮಲ ಮಲಿನ ಹೆಣಗಳನು ಹಾಕಿ
ಜೀವ ಜಲಕೆ ವಿಷವನು ಬೆರೆಸಿ
ಮಡಿ ಮಡಿಯೆಂದು ಬೀಗುತಿರುವೆ...

ಹೇ..! ಮಾನವ
ಎಲ್ಲಿಹುದು ನಿನ್ನಲಿ ಸಂಸ್ಕಾರ ?
ತುಂಬಿದ ನದಿಗೆ ಬಾಗಿಣ ನೀಡುವೆ
ಬತ್ತಿ ಬಸವಳಿದಾಗ ಹಿಂದೆ ಸರಿವೆ
ಸ್ವಾರ್ಥ ಕೃತ್ಯಕೆ ನಿಸರ್ಗವ ದೂಷಿಸಿ
ಜಲ ಜೀವನಾಡಿಯ ಸಂಹರಿಸಿ
ಪ್ರಕೃತಿ ರಕ್ಷಕನೆಂದು ಸೋಗು ಹಾಕಿರುವೆ..

ಹೇ..! ಮಾನವ
ನದಿಯೊಂದು ಹರಿವು ಮಾತ್ರವೇ ?
ಅವಳು ಪವಿತ್ರಳು ನಮಗಾಗಿ ಹುಟ್ಟಿಹಳು
ಶಿವನ ಜಟಧಾರಿ ಗಂಗೆಯವಳು
ಅಗಸ್ತ್ಯ ಕಮಂಡಲವಾರಿ ಕಾವೇರಿಯವಳು
ಎಲ್ಲಿಹುದು ಆ ಭಕ್ತಿ ಆ ಕೃತಜ್ಞತೆ
ಸುಮ್ಮನೆ ಭಕ್ತನೆಂಬ ಮುಖವಾಡ ಧರಿಸಿರುವೆ. 

ಹೇ..! ಮಾನವ
ಕಟುಕನಾಗಬೇಡ ಪ್ರಕೃತಿಯ ಮುಂದೆ
ಇಂದು ಅಟ್ಟಹಾಸ ನಿನದಾದರೆ
ನಾಳೆ ಪ್ರಕೃತಿಯದು ಮರಣ ಮೃದಂಗ
ಎಚ್ಚೆತ್ತು ಕೋ ಮಾನವ..ಎಚ್ಚೆತ್ತು ಕೋ
ಇಲ್ಲವಾದರೆ ಪೃಥ್ವಿಯನೇ ಬಲಿಗೈದ
ದುರಂತ ಅಧ್ಯಾಯಕೆ ಸಾಕ್ಷಿಯಾಗುವೆ..

No comments:

Post a Comment